ಸೇವಾ ಹಿರಿತನ: ಹೈಕೋರ್ಟ್‍ನಲ್ಲಿ ಏರ್ ಇಂಡಿಯಾ ಉದ್ಯೋಗಿಗಳ ಅರ್ಜಿ ವಜಾ

ಬೆಂಗಳೂರು, ಎ.19: ಏರ್ ಇಂಡಿಯಾ ಸಂಸ್ಥೆಯು ಖಾಸಗಿ ಒಡೆತನಕ್ಕೆ ಸೇರಿದ್ದು, ಅದರ ಉದ್ಯೋಗಿಗಳು ಸಂವಿಧಾನದ ವಿಧಿ 226ರ ಅಡಿ ಪರಿಹಾರ ಕೋರಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನೌಕರರು ತಮ್ಮ ತಕರಾರನ್ನು ಸಕ್ಷಮ ಪ್ರಾಧಿಕಾರದ ಮುಂದೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ.
ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಉದ್ಯೋಗಿಗಳಾದ ಪದ್ಮಾವತಿ ಸುಬ್ರಮಣಿಯನ್ ಹಾಗೂ ಮತ್ತಿಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಉದ್ಯೋಗಿಗಳು ಸಕ್ಷಮ ಪ್ರಾಧಿಕಾರದ ಮುಂದೆ ತಮ್ಮ ದೂರು ದಾಖಲಿಸಲು ಮುಕ್ತರಿದ್ದಾರೆ ಎಂದು ಅಭಿಪ್ರಾಯ ಹೇಳಿದ್ದಾರೆ.
ಏರ್ ಇಂಡಿಯಾ ಸಂಸ್ಥೆಯ ಸಂಪೂರ್ಣ ಮಾಲಿಕತ್ವವನ್ನು ಭಾರತ ಸರಕಾರ ತಾಲೇಸ್ ಪ್ರೈವೇಟ್ ಲಿಮಿಟೆಡ್‍ಗೆ ನೀಡಿದೆ. ಸರಕಾರ ಸಂಸ್ಥೆಯಲ್ಲಿನ ಸಂಪೂರ್ಣ ಹೂಡಿಕೆ ಹಿಂಪಡೆದುಕೊಂಡಿದೆ. ಹೀಗಾಗಿ, ಸಂಸ್ಥೆಯು ಸಂಪೂರ್ಣ ಖಾಸಗಿ ಒಡೆತನಕ್ಕೆ ಸೇರಿದ್ದು, ಅದರ ಉದ್ಯೋಗಿಗಳ ಕುಂದುಕೊರತೆಗಳನ್ನು ನೇರವಾಗಿ ರಿಟ್ ನ್ಯಾಯ ವ್ಯಾಪ್ತಿಯಲ್ಲಿ ಪ್ರಶ್ನಿಸಲಾಗದು. ಹೀಗಾಗಿ, ನೌಕರರು ತಮ್ಮ ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದಲ್ಲಿ ಪ್ರಶ್ನಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯ ಪೀಠ ನಿರ್ದೇಶನ ಮಾಡಿದೆ.







