ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಸಚಿವ ಪ್ರಭು ಚವ್ಹಾಣ್

ಬೆಂಗಳೂರು, ಎ.19: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಸೆಕ್ಷನ್ 5 ಅಡಿಯಲ್ಲಿ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಅನುಮತಿಸಿ ಆದೇಶ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.
ಯಾವುದೇ ನಿರ್ದಿಷ್ಟ ಧರ್ಮದವರಾಗಲಿ ಗೋಮಾತೆಯನ್ನು ಸಂರಕ್ಷರಣೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎನ್ನುವುದನ್ನು ಅರಿತು ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ವಿಚಾರವನ್ನು ನ್ಯಾಯಾಲಯವು ಆಳವಾಗಿ ಅಧ್ಯಯನ ಮಾಡಿ ಸರಿಯಾದ ತೀರ್ಪು ನೀಡಿದೆ. ಪೊಲೀಸ್ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸರಕಾರದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್ ತೀರ್ಪುನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸದಾ ಜಾಗೃತರಾಗಿರಬೇಕು ಎಂದು ತಿಳಿಸಿದ್ದಾರೆ.
ಗೋಹತ್ಯೆ ಕಾಯ್ದೆಯ ಸೆಕ್ಷನ್ 5 ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲೂ ರಾಜ್ಯದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಲ್ಲುವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಗಿಸಬಾರದು ಅಥವಾ ಸಾಗಣೆಗೆ ಅವಕಾಶ ಮಾಡಿಕೊಡಬಾರದು. ನಿಯಮ ಉಲ್ಲಂಘಿಸಿ ಸಾಗಣೆ ಮಾಡಿದರೆ ಅದು ಅಪರಾಧ ಕೃತ್ಯವಾಗಲಿದೆ.
ಆದರೆ, ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಕ್ಕೆ ಕೇಂದ್ರ ಅಥವಾ ರಾಜ್ಯ ಸರಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಜಾನುವಾರು ಸಾಗಣೆ ಅಪರಾಧ ಕೃತ್ಯವಾಗುವುದಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







