ನಟ ದಿಲೀಪ್ ವಿರುದ್ಧದ ಕೊಲೆ ಸಂಚಿನ ಪ್ರಕರಣ: ರದ್ದುಗೊಳಿಸಲು ಕೇರಳ ಹೈಕೋರ್ಟ್ ನಕಾರ

ಕೊಚ್ಚಿ, ಎ.19: 2017ರ ನಟಿಯ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಅಧಿಕಾರಿಗಳಿಗೆ ಬೆದರಿಕೆಯೊಡ್ಡಲು ಮತ್ತು ಅವರ ಕೊಲೆಗೆ ಸಂಚು ನಡೆಸಿದ್ದಕ್ಕಾಗಿ ಮಲಯಾಳಂ ನಟ ದಿಲೀಪ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸಲು ಕೇರಳ ಉಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ.
ತನ್ನ ವಿರುದ್ಧದ ಕೊಲೆ ಸಂಚು ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಅಥವಾ ಅದನ್ನು ತನಿಖೆಗಾಗಿ ಸಿಬಿಐಗೆ ವರ್ಗಾಯಿಸುವಂತೆ ಕೋರಿ ದಿಲೀಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಝಿಯಾದ್ ರಹಮಾನ್ ಎಎ ಅವರು ವಜಾಗೊಳಿಸಿದರು.
ಕೊಲೆ ಸಂಚಿನ ಪ್ರಕರಣವು ತನ್ನ ವಿರುದ್ಧ ವೈಯಕ್ತಿಕ ದ್ವೇಷದ ಫಲಿತಾಂಶವಾಗಿದೆ,ತನ್ನ ಕುಟುಂಬದ ಎಲ್ಲ ಪುರುಷ ಸದಸ್ಯರನ್ನು ಅದರಲ್ಲಿ ಸಿಲುಕಿಸಲಾಗಿದೆ ಎಂದು ದಿಲೀಪ ಅರ್ಜಿಯಲ್ಲಿ ಆರೋಪಿಸಿದ್ದರು.
ತನಿಕಾಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಐಪಿಸಿಯ ವಿವಿಧ ಕಲಮ್‌ಗಳಡಿ ದಿಲೀಪ್ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿರುವ ಸಂತ್ರಸ್ತ ನಟಿಯ ಕಾರಿನಲ್ಲಿ ಬಲವಂತದಿಂದ ಪ್ರವೇಶಿಸಿದ್ದ ಕೆಲವು ವ್ಯಕ್ತಿಗಳು ಎರಡು ಗಂಟೆ ಕಾಲ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ಬಳಿಕ ಜನನಿಬಿಡ ಪ್ರದೇಶದಲ್ಲಿ ಪರಾರಿಯಾಗಿದ್ದರು. 2017,ಫೆ.17ರ ರಾತ್ರಿ ಈ ಘಟನೆ ನಡೆದಿದ್ದು,ನಟಿಯನ್ನು ಬ್ಲಾಕ್‌ಮೇಲ್ ಮಾಡಲು ದುಷ್ಕರ್ಮಿಗಳು ಸಂಪೂರ್ಣ ಕೃತ್ಯವನ್ನು ಚಿತ್ರೀಕರಿಸಿದ್ದರು. ಪ್ರಕರಣದಲ್ಲಿ ದಿಲೀಪ ಎಂಟನೇ ಆರೋಪಿಯಾಗಿದ್ದು,ಸದ್ಯ ಜಾಮೀನಿನಲ್ಲಿ ಹೊರಗಿದ್ದಾರೆ.