ಮನಪಾ: ಕರ್ತವ್ಯ ಲೋಪ ಆರೋಪ; ಇಬ್ಬರು ಸಿಬ್ಬಂದಿ ಅಮಾನತು

ಮಂಗಳೂರು: ಹೊರಗುತ್ತಿಗೆ ಕಾವಲು ಸಿಬ್ಬಂದಿ ನೇಮಕ ವಿಚಾರದಲ್ಲಿ ಕರ್ತವ್ಯಲೋಪ ಆರೋಪದಲ್ಲಿ ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಪಾಲಿಕೆಯ ಸಹಾಯಕ ಎಂಜಿನಿಯರ್ ರಾಜೇಶ್ ಮತ್ತು ಆಕೃತಿ ರಚನಾಕಾರ (ಡ್ರಾಫ್ಟ್‌ಮೆನ್) ಪುಷ್ಪರಾಜ್ ಅಮಾನತಿಗೆ ಒಳಗಾದವರು. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕದ್ರಿ, ಮಂಗಳೂರು ಹಾಗೂ ಸುರತ್ಕಲ್ ಪ್ರದೇಶಕ್ಕೆ ಹೊರಗುತ್ತಿಗೆಯಲ್ಲಿ ಕಾವಲು ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಸಲಾಗಿತ್ತು. ಇದರಲ್ಲಿ ಸುರತ್ಕಲ್ ಪ್ರದೇಶದ ಹೊರಗುತ್ತಿಗೆ ನೇಮಕ ಸಮರ್ಪಕವಾಗಿ ನಡೆದಿತ್ತು. ಆದರೆ ಕದ್ರಿ ಮತ್ತು ಮಂಗಳೂರು ಪ್ರದೇಶದ ಹೊರಗುತ್ತಿಗೆ ನೇಮಕದಲ್ಲಿ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಪಾಲಿಕೆ ನಿಯಮ ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸೆಕ್ಯೂರಿಟಿ ಏಜೆನ್ಸಿ ಮಂಗಳೂರಿನ ಬದಲು ಬೆಂಗಳೂರು ಪೊಲೀಸರ ಕ್ಲಿಯರೆನ್ಸ್ ಪತ್ರವನ್ನು ಹೊಂದಿತ್ತು. ಈ ರೀತಿ ನಿಯಮ ಬಾಹಿರವಾಗಿ ಸಹಾಯಕ ಎಂಜಿನಿಯರ್ ಮತ್ತು ಡ್ರಾಫ್ಟ್‌ಮೆನ್ ನೇಮಿಸಿರುವುದು ಆಯುಕ್ತರ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ರದ್ದುಗೊಳಿಸಿ ಅವರಿಬ್ಬರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ರಾಜೇಶ್ ಅವರು ಪಾಲಿಕೆ ಸಿಬ್ಬಂದಿ ಅಲ್ಲ, ಅವರು ಲೋಕೋಪಯೋಗಿ ಇಲಾಖೆಯಿಂದ ಎರವಲು ಮೇಲೆ ಪಾಲಿಕೆಯಲ್ಲಿ ಕರ್ತವ್ಯದಲ್ಲಿದ್ದರು. ಹೀಗಾಗಿ ಅವರನ್ನು ಅಮಾನತುಗೊಳಿಸಿ ಮೇಲಾಧಿಕಾರಿಗಳಿಗೆ ಆದೇಶ ಕಳುಹಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.