ಮೈಸೂರು: ವಜಾಗೊಂಡಿರುವ ಸಂಗೀತ ವಿವಿ ಭೋದಕೇತರ ಸಿಬ್ಬಂದಿಗಳಿದ ಅಮರಣಾಂತ ಉಪವಾಸ ಸತ್ಯಾಗ್ರಹ

ಮೈಸೂರು,ಎ.19: ಸಂಗೀತ ವಿಶ್ವವಿದ್ಯಾನಿಲಯದಲ್ಲಿ ಕಳೆದ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ 21 ಮಂದಿ ಭೋದಕೇತರ ಸಿಬ್ಬಂದಿಗಳನ್ನು ವಜಾಗೊಳಿಸಿರುವುದನ್ನು ಖಂಡಿಸಿ ನಡೆಸುತ್ತಿರುವ ಭೋದಕೇತರರ ಪ್ರತಿಭಟನೆ 58ನೇ ದಿನಕ್ಕೆ ಕಾಲಿಟ್ಟಿದ್ದು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಸೋಮವಾರದಿಂದ ಪ್ರಾರಂಭ ಮಾಡಲಾಗಿದೆ.
ಸಂಗೀತ ವಿವಿ ಮುಂಭಾಗ ನಡೆಸುತ್ತಿರುವ ಪ್ರತಿಭಟನೆಗೆ ಮಂಗಳವಾರ ಎಸ್‍ಡಿಪಿಐ ಬೆಂಬಲ ಸೂಚಿಸಿತು. ಇದೇ ವೇಳೆ ಎಸ್‍ಡಿಪಿಐ ಮುಖಂಡ ಅಮ್ಜದ್ ಖಾನ್ ಮಾತನಾಡಿ, ಕಳೆದ 13 ವರ್ಷಗಳಿಂದ ಇಲ್ಲಿನ ಸಿಬ್ಬಂಧಿಗಳು ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದು, ಇವರನ್ನು ಏಕಾ ಏಕಿ ಕೆಲಸದಿಂದ ವಜಾಗೊಳಿಸಿ ಅವರ ಹೊಟ್ಟೆ ಮೇಲೆ ಹೊಡೆಯಲಾಗಿದೆ. ಇದು ನಿಜಕ್ಕೂ ದುರಂತ, ಹಾಗಾಗಿ ಕೂಡಲೇ ಇಲ್ಲಿನ ಸಿಬ್ಬಂಧಿಗಳನ್ನು ಮತ್ತೆ ಕರ್ತವ್ಯಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಮೈಸೂರಿನಲ್ಲಿ ಬಹಳಷ್ಟು ಹೋರಾಟಗಳು ನಡೆಯುತ್ತಿದೆ. ಜಾವ ಕಂಪನಿ, ಎಟಿ ಅಂಡ್ ಎಸ್. ಕಂಪನಿ ಮತ್ತು ಅಡಕನಹಳ್ಳೀ ಕೈಗಾರಿಕಾ ಹೋರಾಟ ಸೇರಿದಂತೆ ಅನೇಕ ಹೋರಾಟಗಳಿಗೆ ಸರ್ಕಾರ ಸ್ಪಂಧಿಸಲಿಲ್ಲ, ಇದು ಎಲ್ಲೋ ಒಂದು ರೀತಿಯಲ್ಲಿ ಸರ್ಕಾರದ ವೈಫಲ್ಯವನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಇಲ್ಲಿನ ಸಿಬ್ಬಂದಿಗಳಿಗೆ ನ್ಯಾಯ ಕೊಡಿಸಲು ಮುಂದಾಗಿ ಇವರ ಬದುಕಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಬಿಎಸ್‍ಪಿ ಮುಖಂಡ ಚನ್ನಕೆಶವ ಮೂರ್ತಿ, ಚಿಕ್ಕಂದಾನಿ, ಶಿವಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.







