ಐಪಿಎಲ್: ಲಕ್ನೊ ವಿರುದ್ಧ ಆರ್‌ಸಿಬಿ ಜಯಭೇರಿ
ಎಫ್‌ಡು ಪ್ಲೆಸಿಸ್ ಭರ್ಜರಿ ಅರ್ಧಶತಕ , ಹೇಝಲ್‌ವುಡ್‌ಗೆ 4 ವಿಕೆಟ್

ನವಿ ಮುಂಬೈ, ಎ.19: ವೇಗದ ಬೌಲರ್ ಜೋಶ್ ಹೇಝಲ್ ವುಡ್(4-25) ಅತ್ಯುತ್ತಮ ಬೌಲಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು 18 ರನ್‌ಗಳ ಅಂತರದಿಂದ ಮಣಿಸಿತು.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್‌ನ 31ನೇ ಪಂದ್ಯದಲ್ಲಿ ಗೆಲ್ಲಲು 182 ರನ್ ಗುರಿ ಪಡೆದ ಲಕ್ನೊ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಲಕ್ನೊ ಅಗ್ರ ಕ್ರಮಾಂಕದಲ್ಲಿ ಕ್ವಿಂಟನ್ ಡಿಕಾಕ್(3 ರನ್)ಹಾಗೂ ಮನೀಶ್ ಪಾಂಡೆ(6 ರನ್)ಅಲ್ಪ ಮೊತ್ತಕ್ಕೆ ಔಟಾದರು. ಆಲ್‌ರೌಂಡರ್ ಕೃನಾಲ್ ಪಾಂಡ್ಯ(42 ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್)ಹಾಗೂ ಕೆೆ.ಎಲ್.ರಾಹುಲ್(30 ರನ್, 24 ಎಸೆತ, 3 ಬೌಂಡರಿ, 1 ಸಿ.) 3ನೇ ವಿಕೆಟ್‌ಗೆ 31 ರನ್ ಸೇರಿಸಿದರು. ರಾಹುಲ್ ಔಟಾದ ಬಳಿಕ ದೀಪಕ್ ಹೂಡ(13)ಅವರೊಂದಿಗೆ 4ನೇ ವಿಕೆಟ್‌ಗೆ 36 ರನ್ ಜೊತೆಯಾಟ ನಡೆಸಿದ ಪಾಂಡ್ಯ ತಂಡವನ್ನು ಆಧರಿಸಿದರು.
ಮಾರ್ಕಸ್ ಸ್ಟೋನಿಸ್(24 ರನ್,15 ಎಸೆತ), ಹೋಲ್ಡರ್(16) ಹಾಗೂ ಆಯುಷ್ ಬದೋನಿ(13)ಎರಡಂಕೆಯ ಸ್ಕೋರ್ ಗಳಿಸಿದರು.
ಆರ್‌ಸಿಬಿ ಪರ ಜೋಶ್ ಹೇಝಲ್‌ವುಡ್(4-25)ಯಶಸ್ವಿ ಬೌಲರ್ ಎನಿಸಿಕೊಂಡರು. ಹರ್ಷಲ್ ಪಟೇಲ್(2-47)ಎರಡು ವಿಕೆಟ್ ಪಡೆದರು. ಮುಹಮ್ಮದ್ ಸಿರಾಜ್(1-31)ಹಾಗೂ ಮ್ಯಾಕ್ಸ್‌ವೆಲ್(1-11) ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆರ್‌ಸಿಬಿ ತಂಡ ನಾಯಕ ಎಫ್‌ಡು ಪ್ಲೆಸಿಸ್ ಭರ್ಜರಿ ಅರ್ಧಶತಕದ(96 ರನ್, 64 ಎಸೆತ, 11 ಬೌಂಡರಿ, 2 ಸಿಕ್ಸರ್)ನೆರವಿನಿಂದ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿತು.
ಆರ್‌ಸಿಬಿ ಒಂದು ಹಂತದಲ್ಲಿ 62 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಅಗ್ರ ಸರದಿಯ ಕುಸಿತಕ್ಕೆ ಒಳಗಾಗಿತ್ತು. ಆಗ 5ನೇ ವಿಕೆಟ್‌ಗೆ 70 ರನ್ ಸೇರಿಸಿದ ಡು ಪ್ಲೆಸಿಸ್ ಹಾಗೂ ಶಹಬಾಝ್ ಅಹ್ಮದ್(26 ರನ್, 22 ಎಸೆತ, 1 ಬೌಂಡರಿ)ತಂಡವನ್ನು ಆಧರಿಸಿದರು.
ದಿನೇಶ್ ಕಾರ್ತಿಕ್ ಔಟಾಗದೆ 13 ರನ್(8 ಎಸೆತ)ಗಳಿಸಿದರು. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 23 ಹಾಗೂ ಸುಯಾಶ್(10)ಎರಡಂಕೆಯ ಸ್ಕೋರ್ ಗಳಿಸಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಶೂನ್ಯ ಸಂಪಾದಿಸಿದರು. ಲಕ್ನೊ ಪರ ಜೇಸನ್ ಹೋಲ್ಡರ್ (2-52)ಹಾಗೂ ದುಶ್ಮಂತ ಚಾಮೀರ (2-31) ತಲಾ ಎರಡು ವಿಕೆಟ್‌ಗಳನ್ನು ಪಡೆದರು.







