ಕುತುಬ್ ಮಿನಾರ್ ಸಂಕೀರ್ಣದಿಂದ ವಿಗ್ರಹಗಳನ್ನು ತೆರವುಗೊಳಿಸದಂತೆ ದಿಲ್ಲಿ ನ್ಯಾಯಾಲಯ ಆದೇಶ

ಹೊಸದಿಲ್ಲಿ: ಮುಂದಿನ ನಿರ್ದೇಶನದವರೆಗೆ ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಎರಡು ಗಣೇಶನ ವಿಗ್ರಹಗಳನ್ನು ತೆಗೆಯದಂತೆ ದೆಹಲಿ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡಿದೆ.
"ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶಿಸಲಾಗಿದೆ" ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ನಿಖಿಲ್ ಚೋಪ್ರಾ ಅವರು ಏಪ್ರಿಲ್ 13 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಮೇ 17 ಕ್ಕೆ ಮುಂದೂಡಲಾಗಿದೆ.
ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರವು ಕುತುಬ್ ಮಿನಾರ್ ಸಂಕೀರ್ಣದಿಂದ ಎರಡು ಗಣೇಶ ವಿಗ್ರಹಗಳನ್ನು ತೆರವುಗೊಳಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕೇಳಿಕೊಂಡಿತ್ತು. ಅಲ್ಲಿ ವಿಗ್ರಹಗಳ ಸ್ಥಾಪನೆಯು ಅಗೌರವದಿಂದ ಕೂಡಿದೆ ಹಾಗಾಗಿ ಅವುಗಳನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಬೇಕೆಂದು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ ಅಧ್ಯಕ್ಷರು ಕೇಳಿಕೊಂಡಿದ್ದರು.
ವಕೀಲ ಹರಿಶಂಕರ್ ಜೈನ್ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ, ಎಎಸ್‌ಐಗೆ ವಿಗ್ರಹವನ್ನು ತೆಗೆದು ರಾಷ್ಟ್ರೀಯ ವಸ್ತು ಸಂಗ್ರಹಾಲಯ ಅಥವಾ ಯಾವುದೇ ಆಸ್ತಿಯಲ್ಲಿ ಇರಿಸದಂತೆ ತಡೆಯಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟು ಎಲ್ಲಾ ದೇವತೆಗಳ ವಿಗ್ರಹಗಳನ್ನು ಗೌರವಯುತವಾಗಿ ನಿರ್ವಹಿಸುವುದು ಎಎಸ್‌ಐ ನಿರ್ದೇಶಕರ ಕರ್ತವ್ಯ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಜಾಗದ ಹೊರಗೆ ಗಣೇಶನ ವಿಗ್ರಹವನ್ನು ಕಳುಹಿಸಲು ಪುರಾತತ್ವ ಇಲಾಖೆಗೆ ಯಾವುದೇ ಅಧಿಕಾರ ಇಲ್ಲ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.
ವಿವಾದದಲ್ಲಿರುವ ಜಾಗದಿಂದ ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ ಮತ್ತು ಆರಾಧನೆಯ ವಸ್ತುವನ್ನು ತೆಗೆದು ಹಾಕಲು ಸಾಧ್ಯವಿಲ್ಲದ ಕಾರಣ ಬೇರೆಲ್ಲಿಯೂ ಇಡಲಾಗುವುದಿಲ್ಲ ಎಂದು ಮೇಲ್ಮನವಿದಾರರು ವಾದಿಸಿದ್ದರು.
ಸದ್ಯಕ್ಕೆ ಯಾವುದೇ ವಿಗ್ರಹಗಳನ್ನು ತೆಗೆಯುವ ಅಥವಾ ಸ್ಥಳಾಂತರಿಸುವ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಯೋಚಿಸದ ಕಾರಣ, ಮೇಲ್ಮನವಿದಾರರ ಆತಂಕಗಳು ತಪ್ಪಾಗಿದೆ ಎಂದು ಹೇಳಿ ಇಲಾಖೆ ಅರ್ಜಿಯನ್ನು ವಿರೋಧಿಸಿತ್ತು.







