ಕೋಮು ಗಲಭೆಯ ವರದಿಗಾರಿಕೆಯಲ್ಲಿ ಪತ್ರಕರ್ತರು ಸಂಯಮ ಪ್ರದರ್ಶಿಸಬೇಕು: ಎಡಿಟರ್ಸ್ ಗಿಲ್ಡ್

ಹೊಸದಿಲ್ಲಿ, ಎ. 19: ಕೋಮು ಗಲಭೆಯ ವರದಿ ಮಾಡುವಾಗ ಅತ್ಯಂತ ಸಂಯಮ ಪ್ರದರ್ಶಿಸಬೇಕು ಎಂದು ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಮಂಗಳವಾರ ಪತ್ರಕರ್ತರನ್ನು ಆಗ್ರಹಿಸಿದೆ.
ಕಳೆದ ಕೆಲವು ವಾರಗಳಿಂದ ದೇಶದ ಹಲವು ಭಾಗಗಳಲ್ಲಿ ಕೋಮು ಗಲಭೆಗಳು ಹೆಚ್ಚುತ್ತಿರುವ ನಡುವೆ ಎಡಿಟರ್ಸ್ ಗಿಲ್ಡ್ ಈ ಹೇಳಿಕೆ ನೀಡಿದೆ. ಸಮುದಾಯಗಳ ನಡುವಿನ ಘರ್ಷಣೆಯ ವರದಿಯ ಮೌಲ್ಯಮಾಪನ ಹಾಗೂ ಪ್ರಸ್ತುತಿಯಲ್ಲಿ ಶ್ರದ್ಧೆಯ ಕೊರತೆ ಕಾಣಿಸುತ್ತಿದೆ ಎಂದು ಅದು ಹೇಳಿದೆ.
‘ಬ್ರೇಕಿಂಗ್ ನ್ಯೂಸ್’ ನೀಡುವ ಧಾವಂತದಲ್ಲಿ ತಪ್ಪಾಗಿ ವರದಿ ಮಾಡುವ ಕುರಿತು ಎಚ್ಚರಿಕೆ ನೀಡಿರುವ ಎಡಿಟರ್ಸ್ ಗಿಲ್ಡ್, ಇದರಿಂದ ದೀರ್ಘಕಾಲೀನ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದಿದೆ.
ಸುದ್ದಿಯ ಗ್ರಾಹಕರನ್ನು ಸೆಳೆಯಲು ಹಾಗೂ ತಾವೇ ಮೊದಲಿಗೆ ಸುದ್ದಿ ಪ್ರಸಾರ ಮಾಡುವ ತರಾತುರಿಯಲ್ಲಿ ಹಲವು ಸಂಪಾದಕರು ಹಾಗೂ ವರದಿಗಾರರು ತುರ್ತು ನಿರ್ಧಾರಕ್ಕೆ ಬರುತ್ತಾರೆ. ಸತ್ಯ ಹಾಗೂ ಸಂದರ್ಭವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಜವಾಬ್ದಾರಿಯನ್ನು ಒಂದು ಅಥವಾ ಇನ್ನೊಂದು ಸಮುದಾಯದ ಮೇಲೆ ಹೊರಿಸುತ್ತಾರೆ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.





