ಸರಕಾರದ ಸಹಾಯಧನದಲ್ಲಿ ಕಾಶಿಯಾತ್ರೆ: ಸಚಿವೆ ಶಿಕಲಾ ಜೊಲ್ಲೆ

ಬೆಂಗಳೂರು, ಎ.19: ರಾಜ್ಯದ ಆಸಕ್ತ ಯಾತ್ರಾರ್ಥಿಗಳಿಗಾಗಿ ಬಹುನಿರೀಕ್ಷಿತ ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರಕಾರ ಆದೇಶ ಹೊರಡಿಸಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಪ್ರಸ್ತುತ ವಾರ್ಷಿಕ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪವಾದ ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರಕಾರ ಆದೇಶ ಹೊರಡಿಸಿದ್ದು, ಇದು ದೇವಾಲಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ.
ಕಾಶಿಯಾತ್ರೆ ಯೋಜನೆಯನ್ವಯ ಪ್ರತಿ ವರ್ಷ ರಾಜ್ಯದ 30 ಸಾವಿರ ಯಾತ್ರಾರ್ಥಿಗಳು ಸರಕಾರದ ಸಹಾಯಧನದ ಮೂಲಕ ಕಾಶಿಗೆ ತೆರಳಬಹುದಾಗಿದೆ. ಪ್ರತಿಯೊಬ್ಬ ಯಾತ್ರಾರ್ಥಿಗೆ ಈ ಯೋಜನೆಯನ್ವಯ 5 ಸಾವಿರ ರೂ. ಸಹಾಯಧನ ನೀಡಲಾಗುವುದು. ಈ ಕುರಿತಂತೆ ಶೀಘ್ರದಲ್ಲಿಯೇ ಇಲಾಖೆಯಿಂದ ಕಾಶಿಯಾತ್ರೆಗೆ ತೆರಳಲು ಆಸಕ್ತಿ ಹೊಂದಿರುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುವುದು.
ನೆರೆಯ ಮಹಾರಾಷ್ಟ್ರದ ಪಂಡರಾಪುರ ಶ್ರೀಕ್ಷೇತ್ರಕ್ಕೆ ರಾಜ್ಯದಿಂದ ಸಾವಿರಾರು ಮಂದಿ ಭಕ್ತಾದಿಗಳು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಈ ಭಕ್ತಾದಿಗಳ ಅನುಕೂಲಕ್ಕಾಗಿ ಪಂಡರಾಪುರದಲ್ಲಿ ಅತಿಥಿಗೃಹ ನಿರ್ಮಾಣ ಮಾಡಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





