ದೋಷಿ, ಆರೋಪಿಯ ಜೈವಿಕ ಮಾದರಿ ಪಡೆಯಲು ಪೊಲೀಸರಿಗೆ ಅಧಿಕಾರ ನೀಡುವ ಮಸೂದೆಗೆ ರಾಷ್ಟ್ರಪತಿ ಅನುಮತಿ

ಹೊಸದಿಲ್ಲಿ, ಎ. 19: ಅಪರಾಧದ ದೋಷಿಗಳು ಹಾಗೂ ಆರೋಪಿಗಳ ದೈಹಿಕ ಹಾಗೂ ಜೈವಿಕ ಮಾದರಿಗಳನ್ನು ಪಡೆಯಲು ಪೊಲೀಸರಿಗೆ ಅಧಿಕಾರ ನೀಡುವ ಕ್ರಿಮಿನಲ್ ಕಾರ್ಯವಿಧಾನ (ಗುರುತಿಸುವಿಕೆ) ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಒಪ್ಪಿಗೆ ನೀಡಿದ್ದಾರೆ. 1920ರ ಕೈದಿಗಳ ಗುರುತಿಸುವಿಕೆ ಕಾಯ್ದೆಯ ಬದಲಿಗೆ ಈ ಕಾಯ್ದೆಯನ್ನು ಲೋಕಸಭೆಯಲ್ಲಿ ಎಪ್ರಿಲ್ 4ರಂದು ಹಾಗೂ ರಾಜ್ಯ ಸಭೆಯಲ್ಲಿ ಎಪ್ರಿಲ್ 6ರಂದು ಅಂಗೀಕರಿಸಲಾಯಿತು.
‘‘ಈ ಕಾಯ್ದೆ 2022 ಎಪ್ರಿಲ್ 18ರಂದು ರಾಷ್ಟ್ರಪತಿ ಒಪ್ಪಿಗೆಯನ್ನು ಪಡೆದುಕೊಂಡಿದೆ. ಸಾಮಾನ್ಯ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ: 2022ರ ಕ್ರಿಮಿನಲ್ ಕಾರ್ಯವಿಧಾನ (ಗುರುತಿಸುವಿಕೆ) ಕಾಯ್ದೆ, 2022 ಸಂಖ್ಯೆ 11’’ ಎಂದು ಸರಕಾರ ಹೊರಡಿಸಿದ ಗಝೆಟ್ ಅಧಿಸೂಚನೆ ತಿಳಿಸಿದೆ.
ಕ್ರಿಮಿನಲ್ ಪ್ರಕರಣದ ತನಿಖೆಗೆ ದೋಷಿ ಹಾಗೂ ಬಂಧಿತರ ದೈಹಿಕ ಹಾಗೂ ಜೈವಿಕ ಮಾದರಿಗಳನ್ನು ಪಡೆಯಲು ಪೊಲೀಸರಿಗೆ ಕಾನೂನು ಮಂಜೂರಾತಿ ಒದಗಿಸುವ ಹೊರತಾಗಿ ಅಪರಾಧದ ತನಿಖೆಗೆ ಸಹಕರಿಸಲು ವ್ಯಕ್ತಿಯ ಅಳತೆ ಹಾಗೂ ಭಾವಚಿತ್ರಗಳನ್ನು ಒದಗಿಸುವಂತೆ ಆದೇಶಿಸಲು ದಂಡಾಧಿಕಾರಿಗೆ ಈ ಕಾಯ್ದೆ ಅಧಿಕಾರ ನೀಡುತ್ತದೆ.
ವ್ಯಕ್ತಿಯನ್ನು ದೋಷಮುಕ್ತ ಅಥವಾ ಖುಲಾಸೆಗೊಳಿಸಿದ ಸಂದರ್ಭ ಎಲ್ಲ ದಾಖಲೆಗಳನ್ನು ನಾಶ ಮಾಡಬೇಕಾಗುತ್ತದೆ.
ಸಂಗ್ರಹಿಸಬಹುದಾದ ದತ್ತಾಂಶದ ಪ್ರಬೇಧಗಳು, ಯಾವ ಜನರಿಂದ ಅಂತಹ ದತ್ತಾಂಶವನ್ನು ಸಂಗ್ರಹಿಸಬಹುದು ಹಾಗೂ ಅಂತಹ ಸಂಗ್ರಹವನ್ನು ಅಧೀಕೃತಗೊಳಿಸುವ ಅಧಿಕಾರಿಗಳ ಬಗ್ಗೆ ಕಾಯ್ದೆಯಲ್ಲಿ ವಿವರಿಸಲಾಗಿದೆ. ಈ ಕಾಯ್ದೆ ದತ್ತಾಂಶವನ್ನು ಕೇಂದ್ರ ಡಾಟಾಬೇಸ್‌ನಲ್ಲಿ ಸಂಗ್ರಹಿಸಿ ಇರಿಸಲು ಅವಕಾಶವನ್ನು ಕೂಡ ಒದಗಿಸುತ್ತದೆ.
1920ರ ಕಾಯ್ದೆ ಹಾಗೂ 2022ರ ಕಾಯ್ದೆ ದತ್ತಾಂಶ ನೀಡಲು ಪ್ರತಿರೋಧ ಅಥವಾ ನಿರಾಕರಣೆಯು ಸರಕಾರಿ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡುವ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ.







