ಕೋಮು ಸಾಮರಸ್ಯ ಕದಡುವ 22 ಸೋಶಿಯಲ್ ಮೀಡಿಯಾ ಖಾತೆಗಳನ್ನು ಬ್ಲಾಕ್ ಮಾಡಲಿರುವ ಮಹಾರಾಷ್ಟ್ರ ಪೊಲೀಸ್

Photo: Twitter
ಮುಂಬೈ: ಕೋಮು ಸಾಮರಸ್ಯವನ್ನು ಕದಡುವ ಸುಮಾರು 22 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಮಹಾರಾಷ್ಟ್ರ ಸೈಬರ್ ಸೆಲ್ ಮಂಗಳವಾರ ಪ್ರಸ್ತಾಪಿಸಿದೆ ಎಂದು ANI ವರದಿ ಮಾಡಿದೆ. "ಸದ್ಯದ ವಾತಾವರಣದ ಹಿನ್ನೆಲೆಯಲ್ಲಿ, ನಾವು ಕೋಮು ಸೌಹಾರ್ದತೆಯನ್ನು ಕದಡುವಂತಹ ಖಾತೆಗಳನ್ನು ಹುಡುಕಲು ಪ್ರಾರಂಭಿಸಿದ್ದೇವೆ" ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಪೊಲೀಸ್ ಅಧೀಕ್ಷಕ ಸಂಜಯ್ ಶಿಂತ್ರೆ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಸೈಬರ್ ಸೆಲ್ ಕಾರ್ಯಪ್ರವೃತ್ತವಾಗಿದೆ ಎಂದು ಶಿಂತ್ರೆ ಹೇಳಿದರು. ಇಲಾಖೆಯ ಅಡಿಯಲ್ಲಿ ನಲವತ್ತೆಂಟು ಪೊಲೀಸ್ ಠಾಣೆಗಳು ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಕ್ರಿಯವಾಗಿ ಫಿಲ್ಟರ್ ಮಾಡುತ್ತಿವೆ. ರಾಜ್ಯದ ಸೈಬರ್ ಸೆಲ್ ಅಧಿಕಾರಿಗಳು ಮಂಗಳವಾರ ಅಧಿಕಾರಿಗಳನ್ನು ನಿಂದಿಸುವ 12,000 ಪೋಸ್ಟ್ಗಳನ್ನು ಗುರುತಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಅಮರಾವತಿ ಜಿಲ್ಲೆಯಲ್ಲಿ ರವಿವಾರ ಮುಸ್ಲಿಂ ಪ್ರಾಬಲ್ಯದ ದೆಹಲಿ ಗೇಟ್ ಪ್ರದೇಶದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ ನಂತರ ಕೋಮು ಉದ್ವಿಗ್ನತೆ ಉಂಟಾಗಿತ್ತು. ಕೋಮುಗಲಭೆ ಭುಗಿಲೆದ್ದ ನಂತರ ರವಿವಾರ ಸಂಜೆ ಅಮರಾವತಿ ಜಿಲ್ಲೆಯ ನೆರೆಯ ನಗರಗಳಾದ ಅಚಲಪುರ ಮತ್ತು ಪರತ್ವಾಡದಲ್ಲಿ ಕರ್ಫ್ಯೂ ವಿಧಿಸಲಾಯಿತು. ಗಲಭೆ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪೊಲೀಸರು 23 ಜನರನ್ನು ಬಂಧಿಸಿದ್ದಾರೆ





