ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್: ಆರೋಪಿ ಸೆರೆ

ಮಂಗಳೂರು : ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಗೂ ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಆರೋಪದಲ್ಲಿ ಪೊಲೀಸರು ಬೆಳ್ತಂಗಡಿ ತಾಲೂಕು ನಡ ಹೊಕ್ಕಿಲ ಮನೆಯ ಮುಹಮ್ಮದ್ ಅಝ್ಮಲ್ (20) ಎಂಬಾತನನ್ನು ಬಂಧಿಸಿದ್ದಾರೆ.
ಮಾ.4ರಂದು ನಗರದ ರಥಬೀದಿ ಕಾಲೇಜಿನಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆದಿತ್ತು. ಈ ಬಗ್ಗೆ 2 ಪ್ರಕರಣ ದಾಖಲಾಗಿ ಹಲವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಓರ್ವ ಆರೋಪಿಯಾದ ಸಾಯಿ ಸಂದೇಶ ಎಂಬಾತನಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಅಲ್ಲದೆ ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿತ್ತು. ಈ ಕುರಿತು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಹಮ್ಮದ್ ಅಝ್ಮಲ್‌ನನ್ನು ಎ.19ರಂದು ಬಂಧಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ನಕಲಿ ಇನ್‌ಸ್ಟಾಗ್ರಾಂ ಖಾತೆ
ಅಝ್ಮಲ್ ನಕಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದ. ಚಿಕ್ಕಪ್ಪ ವಿದೇಶದಲ್ಲಿದ್ದು ಅವರ ಸಿಮ್ ಬಳಸಿ ಸಂದೇಶಗಳನ್ನು ಹಾಕುತ್ತಿದ್ದ. ಒಂದು ಟ್ವಿಟರ್, 4 ಇನ್‌ಸ್ಟಾ ಗ್ರಾಂ ಖಾತೆ ಹೊಂದಿದ್ದ. ಕೆಲವು ಸಂಘಟನೆಗಳ ಜತೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಕೋಮು ಸೌಹಾರ್ದ ಕೆಡಿಸುವ ಸಂದೇಶಗಳನ್ನು ಹಾಕುವ ವಾಟ್ಸಪ್ ಗ್ರೂಪ್‌ಗಳಲ್ಲಿಯೂ ಈತ ಸದಸ್ಯನಾಗಿದ್ದ. ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಇಂತಹ ಚಟುವಟಿಕೆ ನಡೆಸುತ್ತಿದ್ದ. ಯಾವುದಾದರೂ ವಿವಾದ, ಗೊಂದಲಗಳು ಉಂಟಾದಾಗ ಆಕ್ಷೇಪಾರ್ಹ ಸಂದೇಶಗಳನ್ನು ಹಾಕುತ್ತಿದ್ದ. ಈತನ ಜತೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಕೋಮು ಪ್ರಚೋದಕ ಸಂದೇಶಗಳು ಸಮಾಜದ ಶಾಂತಿ ಸಾಮರಸ್ಯ ಕದಡುವ ಅಪಾಯ ಇರುವುದರಿಂದ ಇಂತಹ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ಚಟುವಟಿಕೆಗಳ ಮೇಲೆ ಸಾಮಾಜಿಕ ಜಾಲತಾಣಗಳ ನಿಗಾ ಘಟಕ ಕಣ್ಣಿಟ್ಟಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಸೆನ್ ಇನ್ಸ್‌ಪೆಕ್ಟರ್ ಸತೀಶ್ ಉಪಸ್ಥಿತರಿದ್ದರು.