ಕೇಜ್ರಿವಾಲ್ ವಿರುದ್ಧದ ಹೇಳಿಕೆಗಾಗಿ ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಪ್ರಕರಣ ದಾಖಲು

Photo: Twitter/@DrKumarVishwas
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರತ್ಯೇಕತಾವಾದಿಗಳೊಂದಿಗೆ ನಂಟು ಕಲ್ಪಿಸಿ ಹೇಳಿಕೆ ನೀಡಿದ ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಪಂಜಾಬ್ ಪೊಲೀಸರು ಇಂದು ಪ್ರಕರಣ ದಾಖಲಿಸಿದ್ದಾರೆ.
ಕೇಜ್ರಿವಾಲ್ ಅವರು 2017 ರಾಜ್ಯ ಚುನಾವಣೆ ವೇಳೆ ಪ್ರತ್ಯೇಕತಾವಾದಿಗಳ ಬೆಂಬಲ ಪಡೆಯಲು ಮನಸ್ಸು ಹೊಂದಿದ್ದರು ಎಂದು ಪಂಜಾಬ್ ಚುನಾವಣೆಗೆ ಮುನ್ನ ವಿಶ್ವಾಸ್ ಆರೋಪಿಸಿದ್ದರು.
ತಾವು ಒಂದೋ ಪಂಜಾಬ್ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಸ್ವತಂತ್ರ ದೇಶದ ಮೊದಲ ಪ್ರಧಾನಿಯಾಗುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದರೆಂದು ವಿಶ್ವಾಸ್ ಹೇಳಿದ್ದರು. ಈ ಮೂಲಕ ವಿಶ್ವಾಸ್ ಅವರು ಪರೋಕ್ಷವಾಗಿ ಖಲಿಸ್ತಾನ್ ಆಂದೋಲನವನ್ನು ಉಲ್ಲೇಖಿಸಿದ್ದರು.
ಐಪಿಸಿಯ ಸೆಕ್ಷನ್ 153, 153ಎ ಸಹಿತ ವಿವಿಧ ಸೆಕ್ಷನ್ಗಳನ್ವಯ ವಿಶ್ವಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಚುನಾವಣೆ ಪ್ರಚಾರವೊಂದರ ಸಂದರ್ಭ ತಮ್ಮನ್ನು ಮತ್ತು ಪಕ್ಷ ಬೆಂಬಲಿಗರನ್ನು ಕೆಲ ಮುಸುಕುಧಾರಿ ವ್ಯಕ್ತಿಗಳು ʼಖಲಿಸ್ತಾನಿಗಳುʼ ಎಂದು ಕರೆದಿದ್ದರು ಎಂದು ಆರೋಪಿಸಿ ಆಪ್ ನಾಯಕರೊಬ್ಬರು ದಾಖಲಿಸಿದ ದೂರಿನ ಆಧಾರದಲ್ಲಿ ಕ್ರಮಕೈಗೊಳ್ಳಲಾಗಿದೆ.
ಬುಧವಾರ ಪಂಜಾಬ್ ಪೊಲೀಸರು ವಿಶ್ವಾಸ್ ಅವರ ಗಝಿಯಾಬಾದ್ ನಿವಾಸದಲ್ಲಿ ಅವರಿಗೆ ನೋಟಿಸ್ ನೀಡಿದರು.
ಆಪ್ ಸ್ಥಾಪಕ ಸದಸ್ಯರಲ್ಲೊಬ್ಬರಾದ ವಿಶ್ವಾಸ್ ಅವರು ಬುಧವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮನ್ನ್ ಅವರನ್ನುದ್ದೇಶಿಸಿ "ದಿಲ್ಲಿಯಲ್ಲಿ ಕುಳಿತಿರುವ ವ್ಯಕ್ತಿಗೆ ರಾಜ್ಯದ ಅಧಿಕಾರ ನೀಡಬೇಡಿ, ದೇಶ ನನ್ನ ಎಚ್ಚರಿಕೆಯನ್ನು ಸ್ಮರಿಸಲಿದೆ" ಎಂದು ಟ್ವೀಟ್ ಮಾಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ನೋಟಿಸ್ ತಲುಪಿತ್ತು.







