ಮುಂಬರುವ ಪೀಳಿಗೆ ಸಹ ಪಾರಂಪರಿಕ ಕಟ್ಟಡ ನೋಡುವಂತಾಗಬೇಕು: ಯದುವೀರ್ ಕೃಷ್ಣದತ್ತ ಒಡೆಯರ್
ಪಾರಂಪರಿಕ ಕಟ್ಟಡ ನೆಲಸಮಗೊಳಿಸದಂತೆ ಒತ್ತಾಯಿಸಿ ಮೈಸೂರಿನಲ್ಲಿ ವರ್ತಕರ ಪಾದಯಾತ್ರೆ

ಮೈಸೂರು,ಎ.20: ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ನೆಲಸಮ ಮಾಡುವುದನ್ನು ವಿರೋಧಿಸಿ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ವತಿಯಿಂದ ವರ್ತಕರು ಬುಧವಾರ ಪಾದಯಾತ್ರೆ ನಡೆಸಿದರು.
ನಗರದ ಚಿಕ್ಕ ಗಡಿಯಾರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ವರ್ತಕರು ದೇವರಾಜ ಮಾರುಕಟ್ಟೆಯನ್ನು ಇಂದು ಮಧ್ಯಾಹ್ನದ ವರೆಗೆ ಸಂಪೂರ್ಣ ಅಂಗಡಿಗಳನ್ನು ಬಂದ್ ಮಾಡಿ ಪಾದಯಾತ್ರೆ ನಡಸಿದರು. ಚಾಮರಾಜ ಒಡೆಯರ್ ಅವರು ಕಟ್ಟಿಸಿರುವ ಕಟ್ಟಡ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದೇವೆ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡ ವರ್ತಕರು ತಿಳಿಸಿದರು.
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
'ಮೈಸೂರು ನಗರದ ಹೃದಯ ಭಾಗದಲ್ಲಿ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ಇದೆ. ತಜ್ಞರು ಹೇಳಿದಂತೆ ಮಾರುಕಟ್ಟೆ ಸಂರಕ್ಷಣೆ ಮಾಡಿದರೆ ಮುಂದಿನ 100 ವರ್ಷ ಬಾಳುತ್ತದೆ. ನಾವೆಲ್ಲ ಪಾರಂಪರಿಕ ಕಟ್ಟಡಗಳನ್ನು ನೋಡುತ್ತಾ ಬೆಳೆದಿದ್ದೇವೆ. ಮುಂಬರುವ ಪೀಳಿಗೆ ಸಹ ಪಾರಂಪರಿಕ ಕಟ್ಟಡ ನೋಡಬೇಕು. ಮಾರುಕಟ್ಟೆಗೆ ಹೋಗುವುದೇ ನಾಗರೀಕರ ಒಂದು ಪದ್ಧತಿ, ಸಮುದಾಯ ಉಳಿಯಲು ಮಾರುಕಟ್ಟೆ ಅವಶ್ಯಕತೆ ಇದೆ' ಎಂದರು.
'ಹೊಸ ಸಮಿತಿ ಆಗಬೇಕು. ವರದಿ ಬಂದಿದೆ ಅಂತ ಅವರು ಹೇಳುತ್ತಿರುವುದು, ನಮಗೆ ಏನೂ ಕೊಟ್ಟಿಲ್ಲ. ಮೈಸೂರು ಅರಮನೆಗೂ ನೂರು ವರ್ಷ ಆಯಿತು,ಹಾಗಂತ ತೆಗೆಯೋಕಾಗತ್ತಾ?, ಹಾಗೆಲ್ಲ ಅಗಲ್ಲ. ಪಾರಂಪರಿಕ ಕಟ್ಟಡಗಳು ಉಳಿಯಬೇಕು. ಪಾದಯಾತ್ರೆಗೆ ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ಇದೆ. ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ' ಎಂದು ತಿಳಿಸಿದರು.
ಬಾಡಿಗೆದಾರರ ಸಂಘದ ಅಧ್ಯಕ್ಷರಾದ ಪೈಲ್ವಾನ್ ಎಸ್.ಮಹದೇವ್ ರವರ ನೇತೃತ್ವದಲ್ಲಿ ಸುಮಾರು 500 ಜನರು ದೇವರಾಜ ಮಾರುಕಟ್ಟೆ ಉಳಿಸಿ, ಲ್ಯಾನ್ಸ್ ಡೌನ್ ಕಟ್ಟಡ ಉಳಿಸಿ ಪಾದಯಾತ್ರೆ ನಡೆಸಿದ್ದಾರೆ. ಈ ಸಂದರ್ಭ ಮೈಸೂರು ವಾಣಿಜ್ಯ ಉದ್ಯಮ ಅಧ್ಯಕ್ಷ ಲಿಂಗರಾಜ, ಕಾರ್ಯದರ್ಶಿ ಶಿವಾಜಿ ಹಾಜರಿದ್ದರು.
ಚಿಕ್ಕಗಡಿಯಾರದ ಆವರಣದಿಂದ ಹೊರಟ ಪಾದಯಾತ್ರೆ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.








