ಗುಜರಾತಿಗೆ ಭೇಟಿ ನೀಡಿರುವ ಡಬ್ಲ್ಯುಎಚ್ಒ ಮುಖ್ಯಸ್ಥರಿಗೆ ಪ್ರಧಾನಿಯಿಂದ ‘ತುಳಸಿಭಾಯಿ’ ನಾಮಕರಣ

ಹೊಸದಿಲ್ಲಿ,ಎ.20: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೆಸಸ್ ಅವರ ಕೋರಿಕೆಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಬುಧವಾರ ಗುಜರಾತಿ ಹೆಸರನ್ನು ನೀಡಿದರು. ‘ನಿಮ್ಮನ್ನು ತುಳಸಿಭಾಯಿ ಎಂದು ಕರೆಯುವುದನ್ನು ನಾನು ಆನಂದಿಸುತ್ತಿದ್ದೇನೆ ’ಎಂದು ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ ಮೂರು ದಿನಗಳ ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗಸಭೆಯಲ್ಲಿ ಮೋದಿಯವರು ಗೆಬ್ರೆಯೆಸಸ್ ಅವರಿಗೆ ತಿಳಿಸಿದರು.
ಭಾರತೀಯರು ತಲೆಮಾರುಗಳಿಂದಲೂ ತುಳಸಿ ಸಸ್ಯವನ್ನು ಆರಾಧಿಸುತ್ತಿದ್ದಾರೆ ಎಂದು ಮೋದಿ ವಿವರಿಸಿದರು.
‘ಡಬ್ಲುಎಚ್ಒ ಮಹಾ ನಿರ್ದೇಶಕ ಟೆಡ್ರೋಸ್ ನನ್ನ ಒಳ್ಳೆಯ ಸ್ನೇಹಿತನಾಗಿದ್ದಾರೆ. ಭಾರತೀಯ ಶಿಕ್ಷಕರು ತನಗೆ ಕಲಿಸಿದ್ದಾರೆ ಮತ್ತು ಅವರಿಂದಾಗಿಯೇ ತಾನಿಲ್ಲಿದ್ದೇನೆ ಎಂದು ಅವರು ಯಾವಾಗಲೂ ನನಗೆ ಹೇಳುತ್ತಿದ್ದರು. ತಾನೀಗ ಪಕ್ಕಾ ಗುಜರಾತಿಯಾಗಿದ್ದೇನೆ,ತನಗಾಗಿ ಹೆಸರೊಂದನ್ನು ನಿರ್ಧರಿಸಿದ್ದೀರಾ ಎಂದು ಅವರು ಇಂದು ನನ್ನನ್ನು ಕೇಳಿದ್ದರು. ಹೀಗಾಗಿ ಓರ್ವ ಗುಜರಾತಿಯಾಗಿ ಅವರನ್ನು ತುಳಸಿ ಎಂದು ನಾನು ಕರೆಯುತ್ತೇನೆ. ತುಳಸಿ ಆಧುನಿಕ ಪೀಳಿಗೆಗಳು ಮರೆಯುತ್ತಿರುವ ಸಸ್ಯವಾಗಿದೆ. ತಲೆಮಾರುಗಳಿಂದಲೂ ತುಳಸಿ ಆರಾಧಿಸಲ್ಪಟ್ಟಿದೆ. ತುಳಸಿಯನ್ನು ವಿವಾಹ ಸಂದರ್ಭದಲ್ಲಿಯೂ ಬಳಸಬಹುದು. ಹೀಗಾಗಿ ನೀವು ಇಂದು ನಮ್ಮಿಂದಿಗೆ ಇಲ್ಲಿದ್ದೀರಿ ’ ಎಂದು ಮೋದಿ ಹೇಳಿದರು.
ಮೋದಿ ಶೃಂಗಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡುತ್ತಿದ್ದರು. ಘೆಬ್ರೆಯೆಸಸ್ ಜೊತೆ ಮಾರಿಷಸ್ ಪ್ರಧಾನಿ ಪ್ರವಿಂದ ಜಗನಾಥ್ ಅವರೂ ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಆಯುಷ್ ಚಿಕಿತ್ಸೆಯ ಲಾಭವನ್ನು ಪಡೆದುಕೊಳ್ಳಲು ದೇಶಕ್ಕೆ ಬರಲು ಬಯಸುವ ವಿದೇಶಿ ಪ್ರಜೆಗಳಿಗಾಗಿ ವಿಶೇಷ ಆಯುಷ್ ವೀಸಾ ವರ್ಗವನ್ನು ಭಾರತವು ಶೀಘ್ರವೇ ಪರಿಚಯಿಸಲಿದೆ ಎಂದು ಮೋದಿ ಪ್ರಕಟಿಸಿದರು.
‘ಆಯುಷ್ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಆವಿಷ್ಕಾರಗಳ ಸಾಧ್ಯತೆಗಳು ಅಪರಿಮಿತವಾಗಿವೆ. ನಾವೀಗಾಗಲೇ ಆಯುಷ್ ಔಷಧಿಗಳು,ಪೂರಕಗಳು ಮತ್ತು ಸೌಂದರ್ಯ ಸಾಧನಗಳ ಉತ್ಪಾದನೆಯಲ್ಲಿ ಅಭೂತಪೂರ್ವ ಉತ್ಕರ್ಷವನ್ನು ನೋಡುತ್ತಿದ್ದೇವೆ’ ಎಂದ ಅವರು,‘ನಾವು ವಿಶೇಷ ಆಯುಷ್ ಹಾಲ್ಮಾರ್ಕ್ ರೂಪಿಸಲಿದ್ದೇವೆ ಮತ್ತು ಭಾರತದಲ್ಲಿ ತಯಾರಾಗುವ ಅತ್ಯುತ್ತಮ ಗುಣಮಟ್ಟದ ಆಯುಷ್ ಉತ್ಪನ್ನಗಳು ಈ ಹಾಲ್ಮಾರ್ಕ್ ಹೊಂದಿರಲಿವೆ ’ ಎಂದರು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪರ್ಯಾಯ ಔಷಧಿಗಳ ಕೊಡುಗೆಯ ಕುರಿತು ಮಾತನಾಡಿದ ಮೋದಿ,ಆಯುಷ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಶೃಂಗಸಭೆ ನಡೆಯುತ್ತಿದೆ. ಕೋವಿಡ್ ಭುಗಿಲೆದ್ದಾಗ ತಾನು ಈ ಬಗ್ಗೆ ಯೋಚಿಸಿದ್ದೆ. ಆ ಸಮಯದಲ್ಲಿ ಆಯುಷ್ ಕಡಾ ಮತ್ತು ಅಂತಹುದೇ ಇತರ ಉತ್ಪನ್ನಗಳು ಜನರಿಗೆ ತಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗಿದ್ದವು ಎಂದರು.







