ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಸಿಐಡಿ ವಿಚಾರಣೆಗೆ ಐವರು ಅಭ್ಯರ್ಥಿಗಳು ಗೈರು?

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.20: ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಪ್ರಕರಣ ಸಂಬಂಧ ಸಿಐಡಿ ವಿಚಾರಣೆಗೆ ಕರೆದಿದ್ದ ಅಭ್ಯರ್ಥಿಗಳ ಪೈಕಿ ಐವರು ಗೈರಾಗಿದ್ದಾರೆ ಎಂದು ವರದಿಯಾಗಿದೆ.
ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆ ಬಹುತೇಕ ಅಭ್ಯರ್ಥಿಗಳು ಬುಧವಾರ ಬೆಳಗ್ಗೆ 10 ಗಂಟೆಯಿಂದಲೇ ನಗರದ ಸಿಐಡಿ ಕಚೇರಿಯ ಅನೆಕ್ಸ್ ಕಟ್ಟಡದಲ್ಲಿ ಸಿಐಡಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
50 ಅಭ್ಯರ್ಥಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಲಾಗಿತ್ತು. ಆದರೆ, ಐವರು ಗೈರಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣವೇನು ಎಂಬುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೇಮಕಾತಿ ಪರೀಕ್ಷೆಯ ಪತ್ರ ಹಾಗೂ ಓಎಂಆರ್ ಶೀಟ್ ಪ್ರತಿಯನ್ನು ಅಭ್ಯರ್ಥಿಗಳು ಕೈಯಲ್ಲಿ ಹಿಡಿದುಬಂದಿದ್ದ ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ಇದರ ಜೆರಾಕ್ಸ್ ಪ್ರತಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.
ಪ್ರಕರಣದ ಹಿನ್ನೆಲೆ?: 545 ಪಿಎಸ್ಸೈಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಕಳೆದ ವರ್ಷದ ಅ.3ರಂದು ರಾಜ್ಯಾದ್ಯಂತ 92 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ 54,104 ಅಭ್ಯರ್ಥಿಗಳು ಹಾಜರಾಗಿದ್ದರು. ಫಲಿತಾಂಶ ಪ್ರಕಟನೆಯ ನಂತರ ಕೆಲವು ವ್ಯತ್ಯಾಸಗಳು ವರದಿಯಾದ ಮೇರೆಗೆ ಆಂತರಿಕ ವಿಚಾರಣೆ ನಡೆಸಲಾಯಿತು.
ಎ.7ರಂದು ಕೆಲವು ದುಷ್ಕೃತ್ಯಗಳ ಬಗ್ಗೆ ಪುರಾವೆಗಳು ಕಂಡು ಬಂದಿದ್ದರಿಂದ, ಗೃಹ ಸಚಿವರು ಸ್ವತಹ ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಮತ್ತು ಆಪಾದಿತ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಅದೇಶಿಸಿದರು. ಅದರಂತೆ ಎ.9ರಂದು ಎಫ್ಐಆರ್ ದಾಖಲಿಸಿಲಾಗಿದೆ. ಇದುವರೆಗೆ 8 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ನಾಲ್ವರು ಪರೀಕ್ಷೆ ಬರೆದಂತ ಅಭ್ಯರ್ಥಿಗಳು, ಇನ್ನುಳಿದ ಮೂವರು ಕಲಬುರ್ಗಿ ಕೇಂದ್ರದ ಮೇಲ್ವಿಚಾರಕರು ಸೇರಿದ್ದಾರೆ. ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ.







