ನಮ್ಮ ಅಂತಿಮ ದಿನ ಹತ್ತಿರವಾಗುತ್ತಿದೆ, ನೆರವಾಗಿ: ಮರಿಯುಪೋಲ್ ನ ಕಮಾಂಡರ್ ವಿನಂತಿ

ಕೀವ್, ಎ.20: ಉಕ್ರೇನ್‌ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್‌ನ ಮೇಲಿನ ಹಿಡಿತವನ್ನು ರಶ್ಯ ಬಿಗಿಗೊಳಿಸುತ್ತಿರುವಂತೆಯೇ, ನಗರದ ಸ್ಟೀಲ್ ಸ್ಥಾವರದ ಒಳಗೆ ಸೇರಿಕೊಂಡು ರಶ್ಯ ಸೇನೆಯ ವಿರುದ್ಧ ಹೋರಾಟ ಮುಂದುವರಿಸಿರುವ ಉಕ್ರೇನ್ ಸೇನೆಯ ಕಮಾಂಡರ್, ಅಲ್ಲಿಂದ ಹೊರಹೋಗಲು ತಕ್ಷಣ ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಕಡೆಯ ಬಲಕ್ಕಿಂತ 10 ಪಟ್ಟು ಹೆಚ್ಚು ಯೋಧರು ಶತ್ರುಪಡೆಯಲ್ಲಿದ್ದಾರೆ. ಬಹುಷಃ ನಾವು ನಮ್ಮ ಅಂತಿಮ ದಿನಗಳನ್ನು ಎದುರು ನೋಡುತ್ತಿರಬಹುದು ಎಂದು ಮರಿಯುಪೋಲ್‌ನಲ್ಲಿ ಉಕ್ರೇನ್‌ನ 36ನೇ ನೌಕಾ ತುಕಡಿಯ ನೇತೃತ್ವ ವಹಿಸಿರುವ ಕಮಾಂಡರ್ ಸೆರಿಹಿಯ್ ವೊಲಿನಾ ಬುಧವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮರಿಯುಪೋಲ್‌ನಲ್ಲಿ ಇನ್ನೂ ಉಳಿದುಕೊಂಡಿರುವ ಉಕ್ರೇನ್ ಯೋಧರು ಶಸ್ತ್ರಾಸ್ತ್ರ ಕೆಳಗಿರಿಸಿ ಶರಣಾಗುವಂತೆ ರಶ್ಯ ಸೇನೆ ಮತ್ತೆ ಸೂಚನೆ ರವಾನಿಸಿದೆ. ಮರಿಯುಪೋಲ್‌ನ ಸ್ಟೀಲ್ ಸ್ಥಾವರದಲ್ಲಿ ಸುಮಾರು 2,500 ಉಕ್ರೇನ್ ಯೋಧರು ಮತ್ತು 400 ವಿದೇಶಿ ಬಾಡಿಗೆ ಸೈನಿಕರಿದ್ದಾರೆ ಎಂದು ರಶ್ಯ ಹೇಳಿದೆ. ಸ್ಥಾವರದೊಳಗೆ ಸುಮಾರು 1,000 ನಾಗರಿಕರೂ ಆಶ್ರಯ ಪಡೆದಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಭೂಗತ ಸುರಂಗ ವ್ಯವಸ್ಥೆಯುಳ್ಳ ಈ ಬೃಹತ್ ಸ್ಟೀಲ್ ಸ್ಥಾವರದಲ್ಲಿ ಉಕ್ರೇನ್‌ನ ಹಲವಾರು ನಾಗರಿಕರು ಆಶ್ರಯ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದಾರೆ.







