ಪಠ್ಯದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸುವ ವಿಚಾರ: ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ದು ಹೀಗೆ...

ಬಿ.ಸಿ.ನಾಗೇಶ್
ತುಮಕೂರು,ಎ.20: ಪಠ್ಯಕ್ರಮದಲ್ಲಿ ರಾಮಾಯಣ-ಭಗವದ್ಗೀತೆ ಅಳವಡಿಸುವ ಮಾತಿಲ್ಲ. ಅದರ ಬದಲಾಗಿ ನೈತಿಕ ಶಿಕ್ಷಣ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಕೋರಾದಲ್ಲಿ ಸರ್ವಮಂಗಳ ನಾಗಯ್ಯರವರ ಸ್ಮರಣಾರ್ಥ ಮಮತಾ ಹರ್ಷ ದಂಪತಿಗಳು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಿಕ್ಷಣ ಎಂದರೆ ಮನುಷ್ಯನ ಜೀವನಕ್ಕೆ ಅಗತ್ಯ ಇರುವ ಎಲ್ಲವನ್ನು ಕಲಿಸುವುದು ಎಂದರ್ಥ.ಪ್ರಸ್ತುತ ದಿನಗಳಲ್ಲಿ ಮನುಷ್ಯನ ಜೀವನಕ್ಕೆ ಬೇಕಾದ ಶಿಕ್ಷಣ ಕೊಡುವುದು ತಪ್ಪಿ ಹೋಗಿದೆ.ಹಾಗಾಗಿ ಅದನ್ನು ಮತ್ತೆ ತರುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರಕಾರ ಪಠ್ಯಕ್ರಮದಲ್ಲಿ ರಾಮಾಯಣ, ಭಗವದ್ಗೀತೆ ಅಳವಡಿಸುವುದಾಗಿ ಯಾವತ್ತೂ ಹೇಳಿಲ್ಲ. ಮನುಷ್ಯನ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾಗಿರುವ ಶಿಕ್ಷಣವನ್ನು ಕಲಿಸುವತ್ತ ಗಮನ ಹರಿಸಲಾಗಿದೆ ಎಂದರು.
ಪಠ್ಯದಲ್ಲಿ ರಾಮಾಯಣ, ಮಹಾಭಾರತ ಅಳವಡಿಕೆ ಎಂದು ಹೇಳಿಲ್ಲ. ಅದರಲ್ಲಿರುವ ಕೆಲ ನೈತಿಕ ಅಂಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಲಾಗುವುದು. ಜತೆಗೆ ಜೀವನಕ್ಕೆ ಬೇಕಾದ ಶಿಕ್ಷಣವನ್ನು ನಾವು ಹೇಳಇಕೊಡುತ್ತೇವೆಯೇ ಹೊರತು, ಧಾರ್ಮಿಕವಾಗಿ ಪೂಜೆಯನ್ನು ಯಾವ ರೀತಿ ಮಾಡುತ್ತೇವೆ ಎಂದು ಹೇಳಿಕೊಡುವುದಿಲ್ಲ ಎಂದರು.
ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಅವರ ನಿಜ ಅಂಶಗಳನ್ನು ಸಹ ಅಳವಡಿಸಿದ್ದೇವೆ. ಬ್ರಿಟೀಷರ ವಿರುದ್ಧ ಹೋರಾಡಿದ ಸಂಗತಿಗಳನ್ನು ಹಾಕಲಾಗಿದೆ ಎಂದ ಅವರು, ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದು ನಿಜ ಎನ್ನುವುದನ್ನು ನಾವು ಸಹ ಒಪ್ಪಿಕೊಂಡಿದ್ದೇವೆ. ಆದರೆ ಕನ್ನಡವನ್ನು ತೆಗೆದು ಹಾಕಿ ಪರ್ಶಿಯನ್ ಭಾಷೆ ಅಳವಡಿಸಿದ್ದು ಕೂಡಾ ಟಿಪ್ಪುಸುಲ್ತಾನ್ ಅವರೇ ಎಂಬುದು ಸಹ ಅಷ್ಟೇ ಸತ್ಯ. ಅದನ್ನು ಸಹ ಪಠ್ಯದಲ್ಲಿ ಅಳವಡಿಸುವಂತೆ ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ಅವರು ಹೇಳಿದ್ದಾರೆ. ಕೇವಲ ಒಂದು ಸತ್ಯವನ್ನು ಮಾತ್ರ ವೈಭವೀಕರಿಸುವುದು ಬೇಡ.ಟಿಪ್ಪುವಿನ ಬಗ್ಗೆ ಇರುವ ಎಲ್ಲ ಸತ್ಯಗಳನ್ನು ಪಠ್ಯದಲ್ಲಿ ಹಾಕುವಂತೆ ಒತ್ತಾಯಿಸಿದ್ದಾರೆ ಎಂದರು.
ಬ್ರಿಟೀಷರು ರೈಲು ಸಂಚಾರ ಆರಂಭಿಸಿದರು ಎಂಬುದಷ್ಟೇ ನಮಗೆ ಗೊತ್ತು. ಆದರೆ ರೈಲು ಸಂಚಾರವನ್ನು ಏಕೆ ಆರಂಭಿಸಿದರು. ಅದರ ಹಿಂದಿನ ಉದ್ದೇಶ ಏನು ಎಂಬುದನ್ನು ಸಹ ತಿಳಿದುಕೊಳ್ಳಬೇಕಲ್ಲವೇ ಎಂದ ಅವರು, ಸತ್ಯವನ್ನು ಹೇಳಲು ಹೊರಟರೆ ಅದನ್ನೇ ಬಿಂಬಿಸಿ ನಮ್ಮನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ ಎಂದು ಬೊಬ್ಬೆ ಹೊಡೆದರೆ ನಾವೇನು ಮಾಡೋಣ ಎಂದರು.
ಪಠ್ಯ ಪುಸ್ತಕದಲ್ಲಿ ಇರುವದೆಲ್ಲ ಸುಳ್ಳು ಎಂದಾದರೆ ಮಕ್ಕಳು ಅದನ್ನು ಓದಿ ಪಾಸ್ ಮಾಡಲು ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಮಕ್ಕಳು ಸತ್ಯವನ್ನು ಮಾತ್ರ ನಂಬುತ್ತಾರೆ. ಹಾಗಾಗಿ ಅವರಿಗೆ ಸತ್ಯ ತಿಳಿಸುವ ಪ್ರಯತ್ನ ನಮ್ಮದಾಗಿದೆ ಎಂದು ಅವರು ಹೇಳಿದರು.
ಅಪ್ಪಚ್ಚು ರಂಜನ್ ಅವರು ಕೊಡಗಿನ ಹಿರಿಯ ಶಾಸಕರು. ಟಿಪ್ಪು ಸುಲ್ತಾನ್ ಕಾಲದಲ್ಲಿ ಬ್ರಿಟೀಷರೊಂದಿಗೆ ನಡೆದ ವ್ಯವಹಾರಗಳ ಬಗ್ಗೆ ದಾಖಲಾತಿ ಸಮೇತ ಹೇಳುತ್ತಿದ್ದಾರೆ. ಟಿಪ್ಪು ಆಡಳಿತದಲ್ಲಿ ಮಹಾರಾಜರುಗಳಿಗೆ ಆಗಿರುವ ಮೋಸದ ಬಗ್ಗೆಯೂ ಅಳವಡಿಸುವಂತೆ ಹೇಳುತ್ತಿದ್ದಾರೆ. ಈ ಕುರಿತು ಅಪ್ಪಚ್ಚು ರಂಜನ್ ಅವರು ಕೊಟ್ಟಿರುವ ದಾಖಲಾತಿಗಳನ್ನು ಪರಿಷ್ಕರಣಾ ಸಮಿತಿ ಮುಂದೆ ಇಟ್ಟಿದ್ದೇವೆ ಎಂದರು.
30 ಪರ್ಸೆಂಟೇಜ್ ಕಮೀಷನ್ ಬಗ್ಗೆ ಸ್ವಾಮೀಜಿ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ನಾಗೇಶ್ ಅವರು, ಈಗಾಗಲೇ ಈ ಬಗ್ಗೆ ನಮ್ಮ ಪಕ್ಷದ ಎಲ್ಲ ಹಿರಿಯ ನಾಯಕರುಗಳು ಹೇಳಿಕೆ ನೀಡಿದ್ದಾರೆ. ಹಾಗಾಗಿ ನಾನೇನು ಹೇಳಿಕೆ ಕೊಡುವುದಿಲ್ಲ. ನಾವೇಲ್ಲ ಪೀಠಕ್ಕೆ ಗೌರವ ಕೊಡಬೇಕು.ಹಾಗೇಯೆ ಪಿಎಸ್ಐ ನೇಮಕಾತಿ ವಿಚಾರದಲ್ಲಿ ನಡೆದಿರುವ ಭ್ರಷ್ಟಾಚಾರ ಸಂಬಂಧ ಸಮಗ್ರ ತನಿಖೆ ನಡೆಸಿ ಇದರ ಹಿಂದೆ ಇರುವ ಕೈಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಂಸದ ಜಿ.ಎಸ್. ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.







