ನ್ಯಾಯಾಧೀಶರು ಜಾಮೀನು ಆದೇಶಗಳಲ್ಲಿ ಸಾಕಷ್ಟು ಕಾರಣಗಳನ್ನು ಒದಗಿಸಲೇಬೇಕು: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಎ.20: ಜಾಮೀನು ಅರ್ಜಿಗಳ ವಿಚಾರಣೆ ನಡೆಸುವ ನ್ಯಾಯಾಧೀಶರು,ವಿಶೇಷವಾಗಿ ಗಂಭೀರ ಅಪರಾಧಗಳು ಮತ್ತು ಕಟ್ಟರ್ ಕ್ರಿಮಿನಲ್ಗಳನ್ನು ಒಳಗೊಂಡ ವಿಷಯಗಳಲ್ಲಿ,ತಮ್ಮ ಆದೇಶಗಳಲ್ಲಿ ಸಾಕಷ್ಟು ಕಾರಣಗಳನ್ನು ಒದಗಿಸಲು ಕರ್ತವ್ಯಬದ್ಧರಾಗಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಜಾಮೀನು ಮಂಜೂರು ಮಾಡಿ ಅಥವಾ ನಿರಾಕರಿಸಿ ಹೊರಡಿಸುವ ಆದೇಶಗಳಲ್ಲಿ ನ್ಯಾಯಾಲಯಗಳು ‘ವಾಸ್ತವಗಳನ್ನು ಮತ್ತು ಸಂದರ್ಭಗಳನ್ನು ’ ಪರಿಗಣಿಸಲಾಗಿದೆ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ಉಲ್ಲೇಖಿಸುವುದು ಇತ್ತೀಚಿನ ಪ್ರವೃತ್ತಿಯಾಗಿದೆ. ನ್ಯಾಯಾಲಯಗಳು ಇಂತಹ ಆದೇಶಗಳನ್ನು ಹೊರಡಿಸಲು ನಿರ್ದಿಷ್ಟ ಕಾರಣಗಳನ್ನು ಉಲ್ಲೇಖಿಸುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಹೇಳಿತು.
ಮಂಗಳವಾರ ಅತ್ಯಾಚಾರ ಆರೋಪಿಯೋರ್ವನಿಗೆ ರಾಜಸ್ಥಾನ ಉಚ್ಚ ನ್ಯಾಯಾಲಯವು ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿದ ಸಂದರ್ಭ ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ವ್ಯಕ್ತಿಯು ತನ್ನ ಅಪ್ರಾಪ್ತವಯಸ್ಕ ಸೋದರಸೊಸೆಯ ಮೇಲೆ ಹಲವಾರು ವರ್ಷಗಳಿಂದ ಅತ್ಯಾಚಾರವನ್ನು ನಡೆಸಿದ ಆರೋಪವನ್ನು ಹೊತ್ತಿದ್ದಾನೆ. ಆರೋಪಿಯ ವಿರುದ್ಧ ಕೊಲೆ,ಅಪಹರಣ ಮತ್ತು ಡಕಾಯಿತಿ ಸೇರಿದಂತೆ 20 ಪ್ರಕರಣಗಳು ಬಾಕಿಯಿವೆ.
ತಾರ್ಕಿಕತೆಯು ನ್ಯಾಯಾಂಗ ವ್ಯವಸ್ಥೆಯ ಜೀವರಕ್ತವಾಗಿದೆ ಎಂದು ಹೇಳಿದ ಪೀಠವು,ಪ್ರತಿಯೊಂದು ಆದೇಶವು ತಾರ್ಕಿಕವಾಗಿರಬೇಕು ಎನ್ನುವುದು ನಮ್ಮ ವ್ಯವಸ್ಥೆಯ ಮೂಲಭೂತ ತತ್ತ್ವಗಳಲ್ಲಿ ಒಂದಾಗಿದೆ. ವಿವೇಚನಾರಹಿತ ಆದೇಶವು ನಿರಂಕುಶತೆಯ ದುರಾಚಾರವನ್ನು ಸೂಚಿಸುತ್ತದೆ ಎಂದು ಹೇಳಿತು.
ಅಪರಾಧವನ್ನೇ ಚಾಳಿಯನ್ನಾಗಿಸಿಕೊಂಡಿರುವ ವ್ಯಕ್ತಿಗೆ ಜಾಮೀನು ಮಂಜೂರು ಮಾಡುವಾಗ ಸಂಬಂಧಿತ ಅಂಶಗಳನ್ನು ಪರಿಗಣಿಸುವಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯವು ವಿಫಲಗೊಂಡಿದೆ ಎಂದೂ ಪೀಠವು ಬೆಟ್ಟು ಮಾಡಿತು.







