2 ಲಕ್ಷ ಚಂದಾದಾರರನ್ನು ಕಳಕೊಂಡ ನೆಟ್‌ಫ್ಲಿಕ್ಸ್: ಕಾರಣವೇನು ಗೊತ್ತೇ?

ನ್ಯೂಯಾರ್ಕ್, ಎ.20: ಈ ವರ್ಷದ ಜನವರಿಯಿಂದ ಮಾರ್ಚ್ ಅವಧಿಯಲ್ಲಿ 2 ಲಕ್ಷ ಚಂದಾದಾರರನ್ನು ಕಳಕೊಂಡಿರುವುದಾಗಿ ಒಟಿಪಿ ವೇದಿಕೆ ನೆಟ್‌ಫ್ಲಿಕ್ಸ್ ಮಂಗಳವಾರ ಹೇಳಿದೆ. ಎಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಮತ್ತೆ 20 ಲಕ್ಷ ಚಂದಾದಾರರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಸಂಸ್ಥೆ ಹೇಳಿದೆ.
ಕಳೆದ 10 ವರ್ಷದಲ್ಲಿ ಇದೇ ಮೊದಲ ಬಾರಿ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರನ್ನು ಕಳೆದುಕೊಂಡಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಚಂದಾದಾರರ ಸಂಖ್ಯೆ ಇಳಿಕೆಯಾದ್ದರಿಂದ ಸಂಸ್ಥೆಯ ಶೇರುಗಳ ಮೌಲ್ಯ 26%ದಷ್ಟು ಪತನವಾಗಿದ್ದು ಮಂಗಳವಾರ ಶೇರು ಮಾರುಕಟ್ಟೆಯಲ್ಲಿ ಸಂಸ್ಥೆಯ 4,000 ಕೋಟಿ ರೂ. ಮೊತ್ತದ ಸಂಪತ್ತು ನಷ್ಟವಾಗಿದೆ. ಹಣದುಬ್ಬರ, ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಪೈಪೋಟಿ ಹೆಚ್ಚಿರುವುದು ಚಂದಾದಾರರನ್ನು ಕಳೆದುಕೊಳ್ಳಲು ಪ್ರಮುಖ ಕಾರಣ . ರಶ್ಯದಲಿ ತನ್ನ ಸೇವೆ ರದ್ದುಗೊಳಿಸಿದ ಬಳಿಕ 7 ಲಕ್ಷ ಚಂದಾದಾರರನ್ನು ಕಳೆದುಕೊಂಡಿದ್ದು, ಇದೀಗ ತನ್ನ ಸೇವೆಯ ದರವನ್ನು ಕಡಿತಗೊಳಿಸುವ ಮೂಲಕ ಮತ್ತೆ ಚಂದಾದಾರರ ವಿಶ್ವಾಸ ವೃದ್ಧಿಸಿಕೊಳ್ಳುವುದಾಗಿ ಸಂಸ್ಥೆ ಹೇಳಿದೆ. ಮಾರ್ಚ್ ಅಂತ್ಯಕ್ಕೆ ನೆಟ್‌ಫ್ಲಿಕ್ಸ್ ವಿಶ್ವದಾದ್ಯಂತ 221.6 ಮಿಲಿಯನ್ ಚಂದಾದಾರರನ್ನು ಹೊಂದಿದೆ.





