ಪ್ರಧಾನಿ ಮೋದಿ ಕುರಿತು ಟ್ವೀಟ್: ದಲಿತ ನಾಯಕ, ಶಾಸಕ ಜಿಗ್ನೇಶ್ ಮೇವಾನಿ ಬಂಧನ

ಗುವಾಹಟಿ,ಎ.21: ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಟ್ವೀಟ್ ಗಳಿಗಾಗಿ ಗುಜರಾತಿನ ಬನಾಸಕಾಂತಾ ಜಿಲ್ಲೆಯ ವಡಗಾಮ್ ಕ್ಷೇತ್ರದ ದಲಿತ ಶಾಸಕ ಜಿಗ್ನೇಶ ಮೇವಾನಿಯವರನ್ನು ಅಸ್ಸಾಂ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ. ಟ್ವಿಟರ್ ಈಗ ಈ ಟ್ವೀಟ್ ಗಳನ್ನು ತಡೆಹಿಡಿದಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಮೇವಾನಿ 2021, ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್ಗೆ ಬೆಂಬಲವನ್ನು ಘೋಷಿಸಿದ್ದರು. ಅವರನ್ನು ಪಾಲನಪುರದ ಸರ್ಕ್ಯೂಟ್ ಹೌಸ್ ನಿಂದ ಬಂಧಿಸಲಾಗಿದೆ.
ಮೇವಾನಿ ಬಂಧನವನ್ನು ದೃಢಪಡಿಸಿರುವ ಕಾಂಗ್ರೆಸ್ ನಾಯಕ ಕನೈಯಾ ಕುಮಾರ್ ಅವರು, ‘ಪೊಲೀಸರಿನ್ನೂ ಎಫ್ಐಆರ್ ಪ್ರತಿಯನ್ನು ನಮ್ಮೆಂದಿಗೆ ಹಂಚಿಕೊಂಡಿಲ್ಲ. ಅಸ್ಸಾಮಿನಲ್ಲಿ ಜಿಗ್ನೇಶ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ ಎಂದಷ್ಟೇ ನಮಗೆ ತಿಳಿಸಲಾಗಿದೆ. ಅವರನ್ನು ಇಂದು ರಾತ್ರಿ ಅಸ್ಸಾಮಿಗೆ ಕರೆದೊಯ್ಯುವ ಸಾಧ್ಯತೆಯಿದೆ ’ ಎಂದು ಗುರುವಾರ ನಸುಕಿನಲ್ಲಿ ಟ್ವೀಟಿಸಿದ್ದರು.
ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇವಾನಿ, ‘ನನಗೆ ಎಫ್ಐಆರ್ ಪ್ರತಿ ನೀಡಲಾಗಿಲ್ಲ, ಆದರೆ ನಾನು ಪೋಸ್ಟ್ ಮಾಡಿದ್ದ ಟ್ವೀಟ್ ಗಾಗಿ ಪ್ರಕರಣ ದಾಖಲಾಗಿದೆ ಮತ್ತು ನನ್ನನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ. ಟ್ವೀಟ್ ನಲ್ಲಿ ನಾನು ಶಾಂತಿಗಾಗಿ ಕೋರಿಕೊಂಡಿದ್ದೆ. ಕೋಮು ಸೌಹಾರ್ದಕ್ಕೆ ಭಂಗ ತರಲು ಪ್ರಯತ್ನಗಳು ನಡೆಯುತ್ತಿರುವುದರಿಂದ ಶಾಂತಿಯನ್ನು ಕಾಯ್ದುಕೊಳ್ಳಬೇಕು ಎಂದು ನಾನು ಹೇಳಿದ್ದೆ. ಶಾಂತಿಯನ್ನು ಪ್ರತಿಪಾದಿಸಿದ್ದಕ್ಕಾಗಿ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿರುವುದು ಅಚ್ಚರಿಯನ್ನುಂಟು ಮಾಡಿದೆ. ಇದು ಸರಕಾರದ ನಿಜವಾದ ಚಿತ್ರವನ್ನು ತೋರಿಸುತ್ತಿದೆ. ನನಗಿನ್ನೂ ನೋಟಿಸ್ ನೀಡಲಾಗಿಲ್ಲ. ನನ್ನ ಕುಟುಂಬದ ಜೊತೆಗೆ ಮಾತನಾಡಲೂ ನನಗೆ ಅವಕಾಶ ನೀಡಿಲ್ಲ. ಇಂತಹ ಪ್ರಕರಣಗಳಿಗೆ ನಾನು ಹೆದರುವುದಿಲ್ಲ’ ಎಂದು ಹೇಳಿದರು.
ಮೇವಾನಿಯವರನ್ನು ಬುಧವಾರ ರಾತ್ರಿ ಪಾಲನಪುರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು,ಗುರುವಾರ ಬೆಳಿಗ್ಗೆ ಅಹ್ಮದಾಬಾದ್ ಗೆ ಕರದೊಯ್ಯಲಾಗಿತ್ತು. ಅಲ್ಲಿಂದ ವಿಮಾನದ ಮೂಲಕ ಅಸ್ಸಾಮಿಗೆ ಕರೆತರಲಾಗಿದೆ.ಬಂಧನದ ಸಂದರ್ಭ ಮೇವಾನಿ ವಿರುದ್ಧದ ಆರೋಪವನ್ನು ಬಹಿರಂಗಗೊಳಿಸಲು ಪೊಲೀಸರು ನಿರಾಕರಿಸಿದ್ದರು. ಆದರೆ ಕಾಂಗ್ರೆಸ್ ನಾಯಕರ ಪ್ರತಿಭಟನೆಗಳ ಬಳಿಕ ಪೊಲೀಸರು ದಾಖಲೆಯೊಂದನ್ನು ಹಾಜರು ಪಡಿಸಿದ್ದು, ಮೇವಾನಿಯವರ ಕೆಲವು ಟ್ವೀಟ್ ಗಳ ಕುರಿತು ಅಸ್ಸಾಮಿನ ಕೊಕ್ರಝಾರ್ ಜಿಲ್ಲೆಯ ನಿವಾಸಿ ಅನೂಪ ಕುಮಾರ ಡೇ ಎನ್ನುವವರು ದೂರು ಸಲ್ಲಿಸಿದ್ದಾರೆಂದು ಅದರಲ್ಲಿ ತಿಳಿಸಿಲಾಗಿದೆ.
ಮೇವಾನಿಯವರ ಟೈಮ್ಲೈನ್ ಪರಿಶೀಲನೆಯು ‘ಕಾನೂನು ಸೂಚನೆಯಂತೆ ’ ಅವರ ಎರಡು ಟ್ವೀಟ್ ಗಳನ್ನು ಟ್ವಿಟರ್ ತಡೆ ಹಿಡಿದಿರುವುದನ್ನು ತೋರಿಸಿದೆ.
ಎ.18ರಂದು ಮೇವಾನಿಯವರು ಮಾಡಿದ್ದ ಟ್ವೀಟ್ ಪ್ರಧಾನಿ ನರೇಂದ್ರ ಮೋದಿಯವರನ್ನು ಮಹಾತ್ಮಾ ಗಾಂಧಿಯವರ ಹಂತಕ ನಾಥುರಾಮ ಗೋಡ್ಸೆ ಅವರ ಆರಾಧಕ ಎಂದು ಬಣ್ಣಿಸಿದೆ. ‘ಗೋಡ್ಸೆಯ ಆರಾಧಕ ಪ್ರಧಾನಿ ಮೋದಿ ಎ.20 ರಿಂದ ಗುಜರಾತ ಪ್ರವಾಸ ಮಾಡಲಿದ್ದಾರೆ. ಹಿಮ್ಮತ್ ನಗರ, ಖಂಭಾಟ್ ಮತ್ತು ವೆರಾವಲ್ ಗಳಲ್ಲಿ ನಡೆದಿದ್ದ ಕೋಮು ಘಟನೆಗಳ ವಿರುದ್ಧ ಶಾಂತಿ ಮತ್ತು ಸೌಹಾರ್ದಕ್ಕಾಗಿ ಮನವಿ ಮಾಡಿಕೊಳ್ಳುವಂತೆ ನಾನು ಅವರನ್ನು ಆಗ್ರಹಿಸುತ್ತಿದ್ದೇನೆ. ಮಹಾತ್ಮಾ ಮಂದಿರದ ನಿರ್ಮಾತೃರಿಂದ ಇಷ್ಟನ್ನಾದರೂ ನಾನು ಆಶಿಸಬಹುದಲ್ಲವೇ?’ ಎಂದು ಮೇವಾನಿ ಟ್ವೀಟ್ ನಲ್ಲಿ ಹೇಳಿದ್ದರು.
ತಡೆಹಿಡಿಯಲಾಗಿರುವ ಇದಕ್ಕಿಂತ ಮೊದಲಿನ ಟ್ವೀಟ್ ನಲ್ಲಿ ಮೇವಾನಿ, ‘ನಾಗ್ಪುರದ ದೇಶದ್ರೋಹಿಗಳು ದಶಕಗಳ ಕಾಲ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ, ಈಗ ಅದೇ ಆರೆಸ್ಸೆಸ್ ಜನರು ವೆರಾವಲ್ ತಾಲೂಕಿನ ಮಸೀದಿಯೊಂದರ ಮೇಲೆ ಕುಣಿಯುತ್ತಿದ್ದಾರೆ. ದ್ರೋಹಿಗಳೇ,ಸ್ವ ಲ್ಪವಾದರೂ ನಾಚಿಕೆ ಪಟ್ಟುಕೊಳ್ಳಿ. ಇದು ರಾಮಪ್ರಸಾದ ಬಿಸ್ಮಿಲ್ಲಾ ಮತ್ತು ಅಶ್ಫಾಕುಲ್ಲಾ ಖಾನ್ ಅವರ ದೇಶವಾಗಿದೆ. ದಯವಿಟ್ಟು ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಳ್ಳಿ. ಸರಕಾರವು ತನ್ನ ಅಪವಿತ್ರ ಉದ್ದೇಶಗಳನ್ನು ತೊರೆಯಬೇಕು’ ಎಂದು ಹೇಳಿದ್ದರು.
ಮೇವಾನಿ ಬಂಧನ ಪ್ರಜಾಪ್ರಭುತ್ವ ವಿರೋಧಿ:ರಾಹುಲ್
ಮೇವಾನಿ ಬಂಧನವನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಎಂದು ಗುರುವಾರ ಬಣ್ಣಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಭಿನ್ನಾಭಿಪ್ರಾಯವನ್ನು ದಮನಿಸಲು ಪ್ರಯತ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಸತ್ಯವನ್ನು ಜೈಲಿಗೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೇವಾನಿ ಬಂಧನವನ್ನು ಖಂಡಿಸಿರುವ ರಾಹುಲ್,ಇದು ಅವರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿರುವ ಜನರಿಗೆ ಅವಮಾನವಾಗಿದೆ ಎಂದಿದ್ದಾರೆ.
‘ಮೋದಿಜಿ, ನೀವು ಸರಕಾರಿ ಯಂತ್ರವನ್ನು ದುರುಪಯೋಗಿಸಿಕೊಂಡು ಭಿನ್ನಾಭಿಪ್ರಾಯವನ್ನು ದಮನಿಸಲು ಪ್ರಯತ್ನಿಸಬಹುದು. ಆದರೆ ಸತ್ಯವನ್ನು ಜೈಲಿಗೆ ತಳ್ಳಲು ನಿಮಗೆಂದೂ ಸಾಧ್ಯವಿಲ್ಲ ’ಎಂದು ರಾಹುಲ್ ಟ್ವೀಟಿಸಿದ್ದಾರೆ.
ಮೇವಾನಿ ಬಂಧನವು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ದಬ್ಬಾಳಿಕೆಯ ವಿರುದ್ಧ ಧ್ವನಿಯೆತ್ತಲಿದ್ದಾರೆ ಎಂದು ಅವರು ಹೇಳಿದ್ದಾರೆ.ಅಸ್ಸಾಂ ಪೊಲೀಸರು ಮಧ್ಯರಾತ್ರಿಯಲ್ಲಿ ಮೇವಾನಿಯವರನ್ನು ಕಾನೂನು ಬಾಹಿರವಾಗಿ ಮತ್ತು ಅಸಾಂವಿಧಾನಿಕವಾಗಿ ಬಂಧಿಸಿರುವುದು ಬಿಜೆಪಿಯ ಸರ್ವಾಧಿಕಾರದ ಇತ್ತೀಚಿನ ಪುರಾವೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ ಟ್ವೀಟಿಸಿದ್ದಾರೆ.








