ಕೋವಿಡ್ ಲಸಿಕೆ ಅಡ್ಡ ಪರಿಣಾಮದಿಂದ ಮೃತಪಟ್ಟವರೆಷ್ಟು ಮಂದಿ ಗೊತ್ತೇ?
ಹೈದರಾಬಾದ್: ದೇಶದಲ್ಲಿ 2021ರ ಫೆಬ್ರವರಿಯಿಂದೀಚೆಗೆ ಲಕ್ಷಾಂತರ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಿದ್ದರೂ, ಲಸಿಕೆಯ ತೀವ್ರ ಅಡ್ಡ ಪರಿಣಾಮದಿಂದಾಗಿ ಮೃತಪಟ್ಟವರ ಸಂಖ್ಯೆ ದೃಢಪಟ್ಟಿರುವುದು ಕೇವಲ ಒಂಬತ್ತು ಎಂದು ಆರೋಗ್ಯ ಸಚಿವಾಲಯದ ಲಸಿಕೆ ಬಳಿಕದ ಅಡ್ಡಪರಿಣಾಮಗಳ ಬಗೆಗಿನ ಸಮಿತಿ (ಎಇಎಫ್ಐ) ಹೇಳಿದೆ.
ಈ ಒಂಬತ್ತು ಸಾವುಗಳಲ್ಲಿ ತಲಾ ಎರಡು ಸಾವುಗಳು ಲಸಿಕೆ ಉತ್ಪನ್ನ ಸಂಬಂಧಿ ಅಡ್ಡ ಪರಿಣಾಮಗಳಿಂದ ಸಂಭವಿಸಿದ್ದು, ಇದನ್ನು ಎ1 ಎಂದು ವರ್ಗೀಕರಿಸಲಾಗಿದೆ. ತೆಲಂಗಾಣ, ಮಹಾರಾಷ್ಟ್ರ ಹಾಗೂ ಜಮ್ಮು ಕಾಶ್ಮೀರದಲ್ಲಿ ತಲಾ ಎರಡು ಸಾವು ದೃಢಪಟ್ಟಿದ್ದರೆ, ಕೇರಳ, ಹರ್ಯಾಣ ಮತ್ತು ಛತ್ತೀಸ್ಗಢದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಈ ಪೈಕಿ ಕೋವಿಶೀಲ್ಡ್ ಅಡ್ಡ ಪರಿಣಾಮದಿಂದ ಮೃತಪಟ್ಟವರು ಎಂಟು ಮಂದಿ ಹಾಗೂ ಕೊವ್ಯಾಕ್ಸಿನ್ ಅಡ್ಡ ಪರಿಣಾಮದಿಂದ ಮೃತಪಟ್ಟವರು ಒಬ್ಬರು ಮಾತ್ರ ಎಂದು ಸ್ಪಷ್ಟಪಡಿಸಿದೆ.
ಲಸಿಕೆಯ ಅಡ್ಡ ಪರಿಣಾಮಗಳಾದ ಅನಾಫಿಲ್ಯಾಕ್ಸಿಸ್, ಥ್ರೊಂಬೋಸಿಸ್ ಮತ್ತು ಥೈರೋಮ್ ಬೊಸೈಟೊಪೆನಿಯಾ ಸಿಂಡ್ರೋಮ್ನಿಂದ ರೋಗಿಗಳು ಮೃತಪಟ್ಟಿದ್ದಾರೆ. ತಜ್ಞರ ಅಂದಾಜಿನ ಪ್ರಕಾರ, ಫ್ಲೂ ಲಸಿಕೆ ನೀಡಿಕೆ ಸಂದರ್ಭದಲ್ಲಿ ಅನಾಫಿಲ್ಯಾಕ್ಸಿಸ್ ಅಡ್ಡ ಪರಿಣಾಮದ ಸಾಧ್ಯತೆ ಸುಮಾರು 13 ಲಕ್ಷ ಡೋಸ್ಗಳಿಗೆ ಒಂದು ಆಗಿರುತ್ತದೆ.
"ಒಟ್ಟಾರೆಯಾಗಿ ಸಣ್ಣಪುಟ್ಟ ಅಪಾಯ ಸಾಧ್ಯತೆಗೆ ಹೋಲಿಸಿದರೆ ಲಸಿಕೆಯ ಪ್ರಯೋಜನಗಳು ಅಗಾಧ. ಮುಂಜಾಗ್ರತಾ ಕ್ರಮವಾಗಿ, ಹಾನಿ ಸಾಧ್ಯತೆಯ ಎಲ್ಲ ವಿಕಾಸಶೀಲ ಸಂಕೇತಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಹಾಗೂ ಪರಾಮರ್ಶಿಸಲಾಗುತ್ತಿದೆ" ಎಂದು ವರದಿಯಲ್ಲಿ ವಿವರಿಸಲಾಗಿದೆ.
ಇದುವರೆಗೆ ಭಾರತದಲ್ಲಿ ಮೊದಲ ಡೋಸ್, ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ಸೇರಿ 186 ಕೋಟಿ ಲಸಿಕಾ ಶಾಟ್ಗಳನ್ನು ನೀಡಲಾಗಿದೆ.