ಸುಳ್ಯ: ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ನಿಧನ

ಸುಳ್ಯ: ಹಿರಿಯ ಸಾಹಿತಿ, ವಿದ್ವಾನ್ ಟಿ.ಜಿ.ಮುಡೂರು ಅವರು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.
ಅಧ್ಯಾಪಕ, ಕೃಷಿಕ, ಕವಿ , ವಿದ್ವಾಂಸರಾಗಿದ್ದ ಅವರು ಕನ್ನಡ, ತುಳು ಭಾಷೆಗಳಲ್ಲಿ ಕೈಯಾಡಿಸಿದವರು ಅಲ್ಲದೇ ‘ ಹೃದಯರೂಪಕ ‘ ಎಂಬ ಆಂಗ್ಲ ನಾಟಕದ ರೂಪಾಂತರ ಕೃತಿಯನ್ನೂ ಪ್ರಕಟಿಸಿದ್ದಾರೆ.
ಟಿ.ಜಿ ಮುಡೂರು 24.11.1927 ರಂದು ಸುಬ್ಬಪ್ಪ ಗೌಡ ಹಾಗೂ ಬಾಲಕ್ಕ ದಂಪತಿ ಪುತ್ರನಾಗಿ ಕಳಂಜ ಗ್ರಾಮದ ವಾರಣಾಸಿಯಲ್ಲಿ ಜನಿಸಿದರು.1948 ರಿಂದ ಪ್ರಾಥಮಿಕ , ಪ್ರೌಢಶಾಲೆಗಳಲ್ಲಿ ದುಡಿದು ನಂತರ ಉಪನ್ಯಾಸಕ ರಾಗಿ ಕೆಲಸ ನಿರ್ವಹಿಸಿ 1982 ರಲ್ಲಿ ನಿವೃತ್ತರಾದರು.
ಮದರಾಸು ವಿಶ್ವವಿದ್ಯಾನಿಲಯದಿಂದ ಕನ್ನಡ ವಿದ್ವಾನ್ ಹಾಗೂ ಮೈಸೂರು ಎಂ.ಎ ಹಾಗೂ ಬಿ.ಎಡ್ ಗಳಿಸಿದ ಇವರು 1964 ರಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ದುಡಿದರು. ಹಲವಾರು ಕೃತಿಗಳನ್ನು ರಚಿಸಿದರು.
ಕಾಡಮಲ್ಲಿಗೆ, ಹೊಸತು ಕಟ್ಟು, ಕುಡಿಮಿಂಚು, ಪ್ರಗತಿಯಕರೆ, ಬಾನಂಚೆ ಇವರ ಕವನ ಸಂಕಲನಗಳು. ಅಬ್ಬಿಯ ಮಡಿಲು, ಕಣ್ ಕನಸು ತೆರೆದಾಗ – ಇವರ ಕಾದಂಬರಿಗಳು ಮತ್ತು ಕಥಾ ಸಂಕಲನಗಳು. ಗೀಟುಗೆರೆ ಅಂಕಣ ದಿಂದ ಇವರು ತುಂಬಾ ಜನಪ್ರಿಯರಾದರು. ಬೆಳ್ಳಿಬೆಳಕು ‘ಇವರ ಮುಕ್ತಕಗಳು ‘ ಜೀವನದಯಾಷ್ಟಮಿ ‘ ಇವರು ರಚಿಸಿದ ಗದ್ಯಾನುದವಾದರೆ , ಧಾರಾ ಪಯಸ್ವಿನಿ ಇವರ ಪ್ರಬಂಧ ಲೇಖನಗಳು, ನಂದಾದೀಪ , ಶ್ರೀಮತಿ , ಶಿವಕುಮಾರಿ , ಕೇರಳ ಕುಮಾರಿ , ಸಖು , ಅಚ್ಚರಿಯ ಅರಳೆಲೆ ,ಮಧ್ಯಮಾ ಇವರು ರಚಿಸಿದ ನಾಟಕಗಳು.
ಇನ್ಸೂರಳಿಯ ‘ ಮತ್ತು ‘ ಮರಳಿ ಮನೆಗೆ ‘ – ಇವರ ಪ್ರಹಸನಗಳು. ಹುತ್ತದಲ್ಲಿ ಹೂ , ದಯೆಯ ದಾಂಗುಡಿ , ಅಮರ ಕಲ್ಯಾಣ ಕ್ರಾಂತಿ – ಇವರು ರಚಿಸಿದ ಬಾನುಲಿ ರೂಪಕಗಳು. ಮಕುಟೋರು ಭಂಗ ಮತ್ತು ಸಾವೋಲಿದ ಸಾವಿತ್ರಿ- ಇವರ ಛಂದೊ ನಾಟಕಗಳು. ಹೊಸಕೆರೆಯ ಹೊನ್ನಮ್ಮ ಇವರ ಜಾನಪದ ಗೀತಾರೂಪಕ ಹಾಗು
ಗುರುವನಗುಡಿ , ಸೊನ್ನೆಯಿಂದ ಸೊನ್ನೆಗೆ- ಗೀತಾ ರೂಪಕಗಳು, ಹೃದಯ ರೂಪಕ- ಇವರ ಆಂಗ್ಲ ನಾಟಕದ ರೂಪಾಂತರ. ಸಿಡಿಲ ಮರಿ ಅಶ್ವತ್ಥಾಮನ್ ಮತ್ತು ಮೋಹನ ಮುರಲಿ ಇವರ ಖಂಡಕಾವ್ಯಗಳು. ಪ್ರಥಮ ಸ್ವಾತಂತ್ರ್ಯ ಸಮರ- ಎಂಬ ಯಕ್ಷಗಾನ ಪ್ರಸಂಗವನ್ನು ರಚಿಸಿದ್ದಾರೆ.
ಒಪ್ಪಕುಂಞಿ – ಇವರ ಹವಿಗನ್ನಡ ಪ್ರಹಸನವಾದರೆ , ಬೊಳ್ಳಾಕನ ಮುಗ್ತ್ -ಇವರ ಅರೆಭಾಷೆ ಕೃತಿ. ತುಳು ಭಾಷೆಯಲ್ಲಿ ಇವರು ಜಾಗೀರ್‌ದಾರ್ ಜಗ್ಗೆ , ಗ್ರಾಜುವೇಟ್ ಗಿರಿಜ , ಸೀನನಸಿನಿಮೊ , ಗಟ್ಯಾಂಡ ರೊಟ್ಟಿ , ತೆಲುಪಾಂಡ ಪಲ್ಲವು , ದೂರದ ಕುಕ್ಕು ಮುಟ್ಟದ ಅಂಬಟೆ , ಕೆಡ್ಡಾಸೊ , ಬಲಿಪರ್ಬ , ಜೋಕುಳೆ ಬುದ್ಧಿ ಎಂಬ 10 ನಾಟಕ ಪ್ರಹಸನಗಳನ್ನು , ಸುಗ್ಗಿ ಪುಣ್ಣಮೆ , ಎಂಬ ತುಳು ಜಾನಪದ ಹಾಡುಗಳ ಸಂಕಲನವನ್ನೂ ,’ ಕೋಟಿ- ಚೆನ್ನಯ್ಯ ‘ ಎಂಬ ತುಳು ಯಕ್ಷಗಾನ ರೂಪಕವನ್ನೂ ರಚಿಸಿರುತ್ತಾರೆ.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಲ್ಲಿ ಸುಳ್ಯ ತಾಲೂಕಿನ ಪ್ರತಿನಿಧಿಯಾಗಿ 15 ವರ್ಷಗಳ ಕಾಲ, ಸುಳ್ಯ ಘಟಕವಾದಾಗ ತಾಲೂಕ ಕ.ಸಾ.ಪ. ಅಧ್ಯಕ್ಷರಾಗಿ 3 ವರ್ಷ ಕಾರ್ಯ ನಿರ್ವಹಿಸಿರುತ್ತಾರೆ.
ಸುಬ್ರಹ್ಮಣ್ಯ , ಪಂಜ , ಅಡ್ಕಾರುಗಳಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನಗಳು ಇವರ ನೇತೃತ್ವದಲ್ಲಿ ಸಂಘಟಿಸಲ್ಪಟ್ಟಿದೆ. ಸುಳ್ಯದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ಇವರ ನೇತೃತ್ವದಲ್ಲಿ ನಡೆದಿದೆ.1997 ರಲ್ಲಿ ಅರಂತೋಡುನಲ್ಲಿ ಜರಗಿದ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ತಾಲೂಕು ರಾಜ್ಯೋತ್ಸವ ಪ್ರಶಸ್ತಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಸುವರ್ಣ ಕರ್ನಾಟಕ ಸಂಸ್ಕೃತಿ ದಿಬ್ಬಣದಲ್ಲಿ ಸುಳ್ಯದಲ್ಲಿ ಇವರನ್ನು ಸನ್ಮಾನಿಸುವುದರ ಜೊತೆಗೆ ‘ ಟಿ.ಜಿ.ಮುಡೂರು ಬದುಕು ಬರಹಗಳ ಅಭಿನಂದನಾ ಗ್ರಂಥ- ನಂದಾದೀಪವನ್ನು ಅರ್ಪಿಸಿ ಅದ್ದೂರಿಯಾಗಿ ಪಂಜದಲ್ಲಿ ಸನ್ಮಾನಿಸಿರುವುದು ಇವರ ಜನಪ್ರಿಯತೆಗೆ
ಸಾಕ್ಷಿ.
ಬಾಪೂಜಿ ಸೇವಾಶ್ರಮ ಪಂಜ , ಸಾರ್ವಜನಿಕ ಆರಾಧನಾ ಸಮಿತಿ ಪಂಜ , ಪಂಜ ಜೇಸಿಸ್ , ಅಪ್ನಾದೇಶ್ ಪಂಜ ಘಟಕ, ಸಂಗಮ ಕಲಾ ಸಂಘ ಕಲ್ಮಡ್ಕ , ಗೀತಾ ಪ್ರಕಾಶನ ಅಜ್ಜಾವರ , ಪ್ರತಿಮಾ ಪ್ರಕಾಶನ ಪಂಜ ಮುಂತಾದ ಸಾಂಸ್ಕೃತಿಕ ಸಾಹಿತ್ಯಕ , ಧಾರ್ಮಿಕ , ಶೈಕ್ಷಣಿಕ ಸಂಸ್ಥೆಗಳ ಜೊತೆ ನಿಕಟ ಸಂಪರ್ಕವನ್ನಿರಿಸಿಕೊಂಡು ಸಕ್ರಿಯವಾಗಿ ತೊಡಗಿಸಿಕೊಂಡು ಸಂತೃಪ್ತ ಜೀವನ ನಡೆಸುವ ಕ್ರಿಯಾಶೀಲ ವ್ಯಕ್ತಿತ್ವದ ಅಪಾರ ಪಾಂಡಿತ್ಯದ ಮುಡೂರುರವರು ಸುಳ್ಯ ಕಂಡ ಅಪರೂಪದ ಸಾಹಿತಿಯಾಗಿದ್ದರು.







