ಈ ಎಚ್ಚರ ಸದಾ ನಮ್ಮಲ್ಲಿರಲಿ

‘ತ್ವಂ ವಂದೇ ಸಾತ್ವಿಕಮ್ ಶಿವಂ’ಈ ಇಂಥ ದುರಿತ ಕಾಲದ ಸಂಕಟ ಸಮಯದಲ್ಲಿ, ಈ ಮಣ್ಣಿನ ಆಧಾರ ಸ್ತಂಭಗಳಾದ ರಂಗಭೂಮಿ, ಚಲಚಿತ್ರ ಕಲಾವಿದರು ಮತ್ತು ಕೃತಿಕಾರರಲ್ಲೊಂದು ವಿನಯಪೂರ್ಣ ವಿನಂತಿ.
ಓದಿನ, ಇಲ್ಲವೇ ಕನಿಷ್ಠ ಜ್ಞಾನದ ಮತ್ತು ಅನುಭವದ ಕೊರತೆಯಿರುವುದನ್ನು ಈ ಕಾಲದ ಜನಸಾಮಾನ್ಯರು ನಾವು ಪದೇ ಪದೇ ಸಾಬೀತು ಪಡಿಸುತ್ತಿದ್ದೇವೆ. ಏನೂ ಬೇಡ, ಸುಮ್ಮನೆ ನಮ್ಮ ತಂದೆ ತಾಯಂದಿರ ಬಾಲ್ಯದಿಂದಿಡಿದು ಇಲ್ಲಿಯವರೆಗಿನ ಈ ನೆಲದ ಅವರ ಸಹಬಾಳ್ವೆಯ ಅನುಭವವನ್ನು ಅವರಲ್ಲೇ ಅಗಾಗ ಕೇಳಿ ದಾಖಲಿಸೋಣ. ಅಗ ನಾವೊಬ್ಬ ಪರಿಪೂರ್ಣ ಭಾರತೀಯರಾಗುವೆವು. ಅದಕ್ಕೂ ಮುಖ್ಯವಾಗಿ ನಮ್ಮ ನಮ್ಮ ಗೌರವಾನ್ವಿತ ಸಮುದಾಯದ ಮನುಷ್ಯರಾಗುವೆವು. ಪುರೋಹಿತಶಾಹಿ ಆಕ್ರಮಣ ಮತ್ತು ದೌರ್ಜನ್ಯದಿಂದ ನಮ್ಮದೇ ಹೆಮ್ಮೆಯ ಕುಲದಮೇಲೆ ಎಷ್ಟು ಅಪಮಾನಗಳಾಗಿವೆ ಅಥವಾ ಸತ್ಕಾರಗಳಾಗಿವೆ ಎಂದು ಅವರನ್ನೇ ಕೇಳಿ ತಿಳಿದುಕೊಳ್ಳೋಣ. ಜಾತಿ-ಮತ ಭೇದವೆಣಿಸದೆ, ಮೇಲ್ಜಾತಿಯವರೆಂದೆನಿಸಿಕೊಂಡವರು ಎಷ್ಟು ಪ್ರತಿಶತ ಇತರ ಕುಲದವರೊಂದಿಗೆ ಕನಿಷ್ಠ ತಮ್ಮ ಅಡುಗೆ ಮನೆಯಲ್ಲಿ ಕೂರಿಸಿಕೊಂಡು ಜೊತೆಯಲ್ಲಿಯೇ ಊಟಮಾಡಿದ್ದಾರೆಂದು ತಿಳಿದುಕೊಳ್ಳೋಣ. ದೇವಳದಲ್ಲಿ ಸಹಪಂಕ್ತಿ ಭೋಜನವಾದರೂ ಮಾಡುವರೇ ಎಂದು ಅದನ್ನೂ ತಿಳಿದುಕೊಳ್ಳೋಣ. ಭಾರತೀಯರೆಂದರೆ ಹಿಂದೂಗಳು ಮಾತ್ರವೇ ಎಂದು ಮೂಲಭೂತವಾದಿಗಳನೇಕರು ನಮ್ಮೆಲ್ಲರನ್ನೂ ದಾರಿತಪ್ಪಿಸಿ ಅಖಂಡವಾಗಿ ಬಲಿಕೊಡುತ್ತಿದ್ದಾರೆ; ಅದು ನಮ್ಮ ದುರಂತವಲ್ಲದೆ ಮತ್ತೇನೂ ಆಗಿರಲು ಸಾಧ್ಯವಿಲ್ಲ.
ಎಲ್ಲ ಮೇಲ್ಜಾತಿಯವರೂ ಮೂಲಭೂತವಾದಿಗಳಲ್ಲದಿರಬಹುದು, ಹಾಗೆಯೇ ಎಲ್ಲ ಮುಸ್ಲಿಮರ, ಕ್ರೈಸ್ತರು, ಸಿಖ್ಖರು, ಪಾರ್ಸಿಗಳು ಕೂಡ ಅಲ್ಲವೇ..!!? ಭಯವನ್ನು ಬಿತ್ತಿ ದ್ವೇಷವನ್ನು ಬೆಳೆಸುವುದು ಬೇಡ.
ರಂಗ ನಾಟಕಗಳು, ಚಲನಚಿತ್ರದಂತಹ ಮೇರು ಕೃತಿಗಳೇ ಮುಂದಿನ ಪೀಳಿಗೆಗೆ ಇತಿಹಾಸ ಬರೆವ ಭಾವದೀಪ್ತಿಗಳು, ಈ ಜವಾಬ್ದಾರಿಯುತವಾದ ಕೆಲಸದಲ್ಲಿ ತೊಡಗಿಕೊಂಡಿರುವ ನಾವಾದರೂ ಎಚ್ಚರದ ನಡೆಯಿಡಬೇಕಲ್ಲವೇ?.
ಸಹಿಷ್ಣು ಭಾರತೀಯತೆಯ, ಸಹಜೀವನದ ಕುರಿತಾದ ಅತ್ಯುತ್ತಮ ನಾಟಕಗಳಿವೆ, ಅವುಗಳನ್ನು ಓದಿಕೊಳ್ಳೋಣ/ರಂಗದ ಮೇಲೆ ಪ್ರಯೋಗಿಸೋಣ. ಅಪರೂಪದ ಚಲನಚಿತ್ರಗಳಿವೆ ಅವನ್ನಾದರೂ ನೋಡಿ ಜ್ಞಾನಾರ್ಜನೆ ಮಾಡಿಕೊಳ್ಳೋಣ. ನಾವು ಅಪ್ಪಟ ಭಾರತೀಯರು ಅಂತಾದರೆ, ನಮ್ಮದೇ ಅತ್ಯುನ್ನತ ಕುಲದ ಒಬ್ಬ ಪರಿಪೂರ್ಣ/ಮಾನವಂತ ಮನುಷ್ಯರೂ ಹೌದು ತಾನೆ? ನಾವೆಲ್ಲರೂ ‘ನಮ್ಮ ನಮ್ಮ ಕುಲವನ್ನು ಬಿಟ್ಟು ನಾನೊಬ್ಬ ಹಿಂದೂ ಮಾತ್ರ’ ಎಂದು ನಾಳೆಯಿಂದ ಗುರುತಿಸಿಕೊಂಡು ನೋಡೋಣ...!!? ಆಗ ಈ ‘ಕಟು ಸಂಪ್ರದಾಯ ಭೂಯಿಷ್ಠ’ ಸಮಾಜದ ನಡೆಯಾದರೂ ಹೇಗಿರುತ್ತದೆಂದು ಪರೀಕ್ಷಿಸೋಣ.! ತಾಯ ಎದೆಹಾಲಲ್ಲಿ ವಿಷ ಬೆರೆಸಬಾರದು.
ಮಕ್ಕಳಿದ್ದಾರೆ ನಮಗೆಲ್ಲ, ಅವರಿಗೆ ಜಗತ್ತಿನ ಅತ್ಯುತ್ತಮ ದೇಶದ ಮಾನವಂತ ನಡೆ ಹೇಗಿರುತ್ತದೆಂಬುದನ್ನು ಜ್ಞಾನವಾಗಿಸಬೇಕು; ಅದರ ಎಚ್ಚರ ಸದಾ ನಮ್ಮಲ್ಲಿರಬೇಕು. ಸಹಿಷ್ಣುತೆಗೆ, ಸಹಬಾಳ್ವೆಗೆ ಮತ್ತೊಂದು ಹೆಸರೇ ಭಾರತ, ಈರ್ಷ್ಯೆಗಲ್ಲ. ಸಹನೆಗೆ, ಧರ್ಮ ಧರ್ಮಗಳ ನಡುವಿನ ಪರಸ್ಪರ ಗೌರವಕ್ಕೆ ಎಂದೂ ಅಳಿಸಲಾಗದ ಹೆಸರೇ ‘ಭಾರತ’. ಹೌದು ತಾನೇ ..!!? ಕಟ್ಟೋಣ, ಕೆಡಹುವುದು ಬೇಡ.







