ಬಿಜೆಪಿ ಸರಕಾರದಿಂದ ದಲಿತ ಸಮುದಾಯಕ್ಕೆ ದ್ರೋಹ: ಸಿದ್ದರಾಮಯ್ಯ ವಾಗ್ದಾಳಿ
'ಪರಿಶಿಷ್ಟರ ಅನುದಾನ ಮೂಲಸೌಕರ್ಯಕ್ಕೆ ದುರ್ಬಳಕೆ'

ಸಿದ್ದರಾಮಯ್ಯ
ಬೆಂಗಳೂರು, ಎ. 21: ‘ನಾಲ್ಕು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಮೀಸಲಿಟ್ಟ ಹಣವನ್ನು ಕಾನೂನಿಗೆ ವಿರುದ್ಧವಾಗಿ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯ ಬಿಜೆಪಿ ಸರಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ನಮ್ಮ ಅವಧಿಯಲ್ಲಿ ಜಾರಿಗೆ ತಂದಿರುವ ಎಸ್ಸಿಪಿ-ಟಿಎಸ್ಪಿ ಕಾಯ್ದೆಯ ಪ್ರಕಾರ ಒಟ್ಟು ಬಜೆಟ್ನ ಶೇ.24.1ರಷ್ಟು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗಷ್ಟೇ ಬಳಸಬೇಕಾಗುತ್ತದೆ. ಆ ವರ್ಷ ಉಳಿಕೆಯಾದರೆ ಅದನ್ನು ನಂತರದ ವರ್ಷ ಖರ್ಚು ಮಾಡಬೇಕು. ನಿಗದಿತ ಪ್ರಮಾಣದಲ್ಲಿ ನಿಗದಿತ ಉದ್ದೇಶಕ್ಕೆ ಖರ್ಚು ಮಾಡದೆ ಇದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ದ ಕಾನೂನುಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ' ಎಂದು ಹೇಳಿದ್ದಾರೆ.
‘2021-22ರ ಬಜೆಟ್ನಲ್ಲಿ ಉದ್ದೇಶಿತ ಕಾಯ್ದೆಯನ್ವಯ ಯೋಜನಾ ವೆಚ್ಚದ ಶೇ.24.1ರಷ್ಟು ಅಂದರೆ 26,695.64 ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಡಲಾಗಿತ್ತು. ಆದರೆ ರಾಜ್ಯ ಸರಕಾರ ಕಾಯ್ದೆಯನ್ನು ಉಲ್ಲಂಘಿಸಿ ಒಟ್ಟು ಹಣದಲ್ಲಿ 7885.32 ಕೋಟಿ ರೂ.ಗಳನ್ನು ಮೂಲಸೌಕರ್ಯದ ಯೋಜನೆಗಳಿಗೆ ವ್ಯಯ ಮಾಡಿದೆ. ಇದು ಸಂಪೂರ್ಣವಾಗಿ ಕಾನೂನು ವಿರೋಧಿ ನಡೆಯಾಗಿದ್ದು ಇದಕ್ಕೆ ಕಾರಣಕರ್ತರಾದವರ ವಿರುದ್ದ ಎಸ್ಸಿಪಿ-ಟಿಎಸ್ಪಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಸಿದ್ದರಾಮಯ್ಯ, ಸಿಎಂ ಅವರನ್ನು ಆಗ್ರಹಿಸಿದ್ದಾರೆ.
‘2018-21ರ ನಾಲ್ಕು ವರ್ಷಗಳ ಅವಧಿಯಲ್ಲಿ ಈ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಹಣದಲ್ಲಿ 7885.32 ಕೋಟಿ ರೂ.ಗಳನ್ನು ನೀರಾವರಿ, ನಗರಾಭಿವೃದ್ದಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಗಳ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಫಲಾನುಭವಿಗಳಾಗಿರುವ ಯೋಜನೆಗಳಿಗೆ ಹಣ ಕಡಿತಗೊಳಿಸಲಾಗಿದೆ' ಎಂದು ದೂರಿದ್ದಾರೆ.
‘ಎಸ್ಸಿಪಿ-ಟಿಎಸ್ಪಿ ಹಣದ ಸ್ವಲ್ಪ ಭಾಗವನ್ನು ಸಾಮಾನ್ಯ ಮೂಲಸೌಕರ್ಯಗಳಿಗೆ ಬಳಸಲು ಕಾಯ್ದೆಯಲ್ಲಿ ಅವಕಾಶವಿದ್ದರೂ, ಇಷ್ಟೊಂದು ಪ್ರಮಾಣದ ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ನೇರ ಫಲಾನುಭವಿಗಳಲ್ಲದ ಯೋಜನೆಗಳಿಗೆ ಬಳಸುವುದು ಆ ಸಮುದಾಯಕ್ಕೆ ಬಗೆಯುವ ದ್ರೋಹ ಮಾತ್ರವಲ್ಲ, ಕಾನೂನಿನ ಉಲ್ಲಂಘನೆಯೂ ಹೌದು' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಂಪನ್ಮೂಲಗಳನ್ನು ಹಂಚಿಕೆ ಮಾಡುವಾಗ ಅನುಸರಿಸಬೇಕಾದ ಸೂತ್ರಗಳು ಯಾವುವು ಎಂಬುದನ್ನು ಎಸ್ಸಿಪಿ-ಟಿಎಸ್ಪಿ ಕಾಯ್ದೆಯ ಸೆಕ್ಷನ್ 3ರಲ್ಲಿ ಸ್ಪಷ್ಟವಾಗಿ ಹೇಳಿದೆ. ಅದರ ಪ್ರಕಾರ ‘ವಿನಾಯಿತಿಸಲಾದ ವೆಚ್ಚ' ಎಂದರೆ ಈ ಅಧಿನಿಯಮದ ಅನ್ವಯದಿಂದ ವಿನಾಯಿತಿಗೊಳಿಸಲಾದ ವೆಚ್ಚ ಮತ್ತು ಇದು ವೇತನ, ವೇತನ ಸಹಾಯಾನುದಾನ, ಪಿಂಚಣಿ, ಆಡಳಿತಾತ್ಮಕ ವೆಚ್ಚ, ಮೂಲಧನ ಮರು ಸಂದಾಯ ಮತ್ತು ಸರಕಾರ ತನ್ನದೇ ಸಾಲಗಳ ಲೆಕ್ಕದ ಮೇಲೆ ಬಡ್ಡಿ ಸಂದಾಯ ಮತ್ತು ಸರಕಾರದ ಉದ್ಯಮಗಳ ಮೂಲಕ ಆಯವ್ಯಯದ ಹೊರತಾದ ಸಾಲಗಳು ಹಾಗೂ ಸರಕಾರವು ಅಧಿಸೂಚಿಸಿದ ಆಡಳಿತಾತ್ಮಕ ಸ್ವರೂಪದ ಇತರ ಯಾವುದೇ ವೆಚ್ಚವನ್ನು ಒಳಗೊಳ್ಳುತ್ತದೆ.
‘ಅವುಗಳನ್ನು ಹೊರತುಪಡಿಸಿ ಹಂಚಿಕೆ ಮಾಡಬಹುದಾದ ಮೊತ್ತದ ಆಧಾರದ ಮೇಲೆ ಎಸ್ಸಿಪಿ ಮತ್ತು ಟಿಎಸ್ಪಿಗೆ ಅನುದಾನ ನಿಗದಿಪಡಿಸಲಾಗುತ್ತದೆ. ಇದರ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನಿಗದಿಪಡಿಸಲಾಗುತ್ತಿದೆ. 2012-13ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರಿಗಾಗಿ ಕೇವಲ 7,200 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಈ ಮೊತ್ತವು 2014-15ರ ವೇಳೆಗೆ 15,834 ಕೋಟಿ ರೂ.ಗಳಿಗೆ ಏರಿಕೆಯಾಯಿತು. 2018ರ ಫೆಬ್ರವರಿಯಲ್ಲಿ ನಾನು ಬಜೆಟ್ ಮಂಡಿಸಿದಾಗ 29,691.5 ಕೋಟಿ ರೂ.ಗಳನ್ನು ಈ ಯೋಜನೆಗೆ ಮೀಸಲಿರಿಸಿದ್ದೆ' ಎಂದು ಅವರು ವಿವರ ನೀಡಿದ್ದಾರೆ.
‘ಆದರೆ, ಮೂರು ವರ್ಷಗಳಿಂದ ಬಿಜೆಪಿ ಸರಕಾರವು ಈ ವರ್ಗಗಳಿಗೆ ಖರ್ಚು ಮಾಡುವ ಅನುದಾನವನ್ನು ಒಂದೇ ಸಮನೆ ಕಡಿಮೆ ಮಾಡುತ್ತಿದೆ. ಬಜೆಟ್ ಗಾತ್ರ ಮಾತ್ರ ದೊಡ್ಡದಾಗುತ್ತಿದೆಯೇ ಹೊರತು, ಜನರ ಕಲ್ಯಾಣಕ್ಕಾಗಿ ಖರ್ಚು ಮಾಡುವ ಅನುದಾನ ಕಡಿಮೆಯಾಗುತ್ತಿದೆ. 2008-09ರಿಂದ 2012-13ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್ಸಿಪಿ ಮತ್ತು ಟಿಎಸ್ಪಿಗೆ ಮೀಸಲಿಟ್ಟಿದ್ದ ಹಣ ಒಟ್ಟು 22,261 ಕೋಟಿ ರೂ,. 2018ರಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಐದು ವರ್ಷಗಳಲ್ಲಿ ಈ ಯೋಜನೆಗೆ 88,395 ಕೋಟಿ ರೂ.ಖರ್ಚು ಮಾಡಿದ್ದೆವು' ಎಂದು ಅವರು ಮಾಹಿತಿ ನೀಡಿದ್ದಾರೆ.







