ಹೊಸದಿಲ್ಲಿ, ಪಂಜಾಬ್ ನಂತರ ಕರ್ನಾಟಕದಲ್ಲಿ ಸರಕಾರ ರಚಿಸಲಿದ್ದೇವೆ: ಅರವಿಂದ ಕೇಜ್ರಿವಾಲ್

ಬೆಂಗಳೂರು, ಎ.21: ಹೊಸದಿಲ್ಲಿ, ಪಂಜಾಬ್ ನಂತರ ಕರ್ನಾಟಕದಲ್ಲಿ ಸರಕಾರ ರಚಿಸಲಿದ್ದೇವೆ. ಕರ್ನಾಟಕದಲ್ಲಿ ಹಿಂದೆ ಶೇ.20ರಷ್ಟು ಕಮಿಷನ್ ಪಡೆಯುವ ಸರಕಾರವಿತ್ತು. ಈಗ ಶೇ.40ರಷ್ಟು ಕಮಿಷನ್ ಸರಕಾರ ಚಾಲ್ತಿಯಲ್ಲಿದೆ ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದರು.
ಗುರುವಾರ ನಗರದ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಆಪ್ ಪಕ್ಷವು ಹಮ್ಮಿಕೊಂಡಿದ್ದ ಬೃಹತ್ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹೊಸದಿಲ್ಲಿ, ಪಂಜಾಬ್ ನಂತರ ಕರ್ನಾಟಕದಲ್ಲಿ ಸರಕಾರ ರಚಿಸಲಿದ್ದೇವೆ ಎಂದ ಅವರು, ಕರ್ನಾಟಕದಲ್ಲಿ ಹಿಂದೆ ಶೇ.20ರಷ್ಟು ಕಮಿಷನ್ ಪಡೆಯುವ ಸರಕಾರವಿತ್ತು. ಈಗ ಶೇ.40ರಷ್ಟು ಕಮಿಷನ್ ಸರಕಾರ ಚಾಲ್ತಿಯಲ್ಲಿದೆ. ಆದರೆ, ಹೊಸದಿಲ್ಲಿಯಲ್ಲಿ ಕಮಿಷನ್ ಪಡೆಯದ ಸರಕಾರ ಇದೆ. ನಮ್ಮದು ಅತ್ಯಂತ ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಸರಕಾರ ಎಂದು ಪ್ರತಿಪಾದಿಸಿದರು.
ನಾನು ಅತ್ಯಂತ ಪ್ರಾಮಾಣಿಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮಾಣಪತ್ರ ನೀಡಿದ್ದಾರೆ. ಏಕೆಂದರೆ, ನನ್ನ ಮನೆ ಮೇಲೆ ಸಿಬಿಐ, ಆದಾಯತೆರಿಗೆ ಸೇರಿದಂತೆ ಎಲ್ಲ ಇಲಾಖೆಗಳ ಮೂಲಕ ದಾಳಿ ನಡೆಸಲಾಯಿತು. ಆದರೆ, ಅವರಿಗೆ ಏನೂ ದೊರೆಯಲಿಲ್ಲ. ನನಗೆ ರಾಜಕೀಯ ಮಾಡಲು ಬರುವುದಿಲ್ಲ. ಆದರೆ, ನನಗೆ ಜನಸಾಮಾನ್ಯರ ನೋವುಗಳು, ಭಾವನೆಗಳು ಅರ್ಥವಾಗುತ್ತವೆ ಎಂದರು.
ಐದು ವರ್ಷಗಳಲ್ಲಿ ಹೊಸದಿಲ್ಲಿ ಸರಕಾರಿ ಶಾಲೆಗಳನ್ನು ಬದಲಾಯಿಸಿದ್ದೇವೆ. ಈ ವರ್ಷ ನಾಲ್ಕು ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಸರಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಅಷ್ಟೇಅಲ್ಲದೆ, ಆಸ್ಪತ್ರೆಗಳ ಪರಿಸ್ಥಿತಿಯೂ ಹದಗೆಟ್ಟಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಎಲ್ಲ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವಿವರಿಸಿದರು.
ನಾವು ಪ್ರಾಮಾಣಿಕರಾಗಿದ್ದೇವೆ. ಹೀಗಾಗಿಯೇ ಹಣ ಉಳಿಸಿದ್ದೇವೆ. ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಮತ್ತು ಬಸ್‍ಗಳಲ್ಲಿ ಮಹಿಳೆಯರಿಗೆ ಪ್ರಯಾಣದ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿದ್ದೇವೆ. ನಮಗೆ ಗೂಂಡಾಗಿರಿ ಮಾಡಲು ಬರುವುದಿಲ್ಲ. ಆದರೆ, ಶಾಲೆಗಳನ್ನು ನಿರ್ಮಿಸುವುದು ಗೊತ್ತಿದೆ. ನಿಮಗೆ ಉತ್ತಮ ಶಾಲೆ ಮತ್ತು ಆಸ್ಪತ್ರೆಗಳು ಬೇಕಾಗಿದ್ದರೆ ಆಮ್‍ಆದ್ಮಿ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್, ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ, ಆಮ್‍ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಮುಖಂಡರಾದ ಎಚ್.ಡಿ.ಬಸವರಾಜು, ಭಾಸ್ಕರ್‍ರಾವ್, ಮೋಹನ್‍ದಾಸರಿ, ಪ್ರಕಾಶ್ ಕಮರೆಡ್ಡಿ, ರೈತ ಸಂಘದ ಮುಖಂಡರಾದ ಬಸವರಾಜಪ್ಪ, ಭಕ್ತರಹಳ್ಳಿ ಬೈರೇಗೌಡ, ಮಹಾಂತೇಶ್, ಮಂಜುನಾಥಗೌಡ, ರಘು, ರವಿಚಂದ್ರ, ಕಾರ್ತಿಕ್, ರೆಡ್ಡಿಹಳ್ಳಿ ವೀರಣ್ಣ, ಸತೀಶ್ ಕೆಂಕೆರೆ, ಹೊನ್ನೂರು ಮುನಿಯಪ್ಪ, ಗಣೇಶ್, ನಾಗರಾಜ್, ಶಾಂತವೀರರೆಡ್ಡಿ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
ಆಪ್ ಸೇರಿದ ನಾಯಕರು
ಸಮಾವೇಶದಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್, ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ, ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ, ಬಸವರಾಜಪ್ಪ, ಭಕ್ತರಹಳ್ಳಿ ಬೈರೇಗೌಡ ಅವರು ಆಮ್‍ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.
ಅಯೋಗ್ಯರು, ಅತ್ಯಾಚಾರಿಗಳ ಪಕ್ಷ
ಈ ದೇಶದಲ್ಲಿರುವ ಗೂಂಡಾಗಳು, ಅಯೋಗ್ಯರು, ಅತ್ಯಾಚಾರಿಗಳಿಗೆ ಒಂದು ಪಕ್ಷ ಮೀಸಲಾಗಿದ್ದು, ಅವರೆಲ್ಲರೂ ದಿನನಿತ್ಯ ಅಲ್ಲಿ ಸೇರ್ಪಡೆಯಾಗುತ್ತಿರುತ್ತಾರೆ. ದೇಶದ ಯಾವ ಕಡೆಯಲ್ಲಾದರೂ ಅತ್ಯಾಚಾರ ನಡೆದರೆ, ಆ ಆರೋಪಿಯನ್ನು ಮೆರವಣಿಗೆ ನಡೆಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಇದೇ ಪಕ್ಷದವರು ಗೂಂಡಾಗಳನ್ನು, ಅಯೋಗ್ಯರನ್ನು ಸೇರಿಸಿಕೊಳ್ಳುತ್ತಾರೆ. ಹೀಗೆ ಮುಂದುವರೆದರೆ ದೇಶ ಪ್ರಗತಿಯತ್ತ ಸಾಗುವುದು ಯಾವಾಗ ಎಂದು ಬಿಜೆಪಿ ವಿರುದ್ಧ ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟೀಕಿಸಿದರು.






.jpg)

