80 ಬಡಗುಬೆಟ್ಟು ಗ್ರಾ.ಪಂ.; ಚೊಚ್ಚಲ ಕೆ.ಎಂ.ಉಡುಪ ಗ್ರಾಮ ಪುರಸ್ಕಾರ-2022ಕ್ಕೆ ಆಯ್ಕೆ
ಉಡುಪಿ : ಬ್ಯಾಂಕಿನ ಹಿರಿಯ ಅಧಿಕಾರಿಯಾಗಿ ಗ್ರಾಮೀಣ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ ಕೆ.ಎಂ.ಉಡುಪ ಅವರ ಹೆಸರಿನಲ್ಲಿ ಕೆ.ಎಂ.ಉಡುಪ ಟ್ರಸ್ಟ್ ಮೂಲಕ ನೀಡಲಾಗುವ ಚೊಚ್ಚಲ ‘ಕೆ.ಎಂ. ಉಡುಪ ಗ್ರಾಮ ಪುರಸ್ಕಾರ-2022’ಕ್ಕೆ 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ ಎಂದು ಟ್ರಸ್ಟಿ ಕೆ. ಹೇಶ್ ಉಡುಪ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪರ ಆಸಕ್ತ ವಿಷಯಗಳಿಗೆ ಸಂಬಂಧಿ ಸಿದಂತೆ ಗ್ರಾಮಾಭಿವೃದ್ಧಿಯನ್ನು ಕೈಗೊಂಡ ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ಅತ್ಯುತ್ತಮ ಗ್ರಾಪಂನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳ ಅನುಭವಿ ತಜ್ಞರನ್ನೊಳಗೊಂಡ ಆಯ್ಕೆ ಸಮಿತಿ ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ ಶಿಫಾರಸು ಮಾಡುವ ಗ್ರಾಪಂನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದವರು ಹೇಳಿದರು.
ಒಂದು ಲಕ್ಷ ರೂ.ನಗದು: ಚೊಚ್ಚಲ ಪ್ರಶಸ್ತಿಗೆ 80 ಬಡಗುಬೆಟ್ಟು ಗ್ರಾಪಂ ಆಯ್ಕೆಯಾಗಿದ್ದು, ರಾಷ್ಟ್ರೀಯ ಗ್ರಾಪಂ ದಿನಾಚರಣೆ ಆಚರಿಸಲ್ಪಡುವ ಎ.24ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಒಂದು ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಇನ್ನು ಮುಂದೆ ಪ್ರತಿ ವರ್ಷ ಜಿಲ್ಲೆಯ ಅತ್ಯುತ್ತಮ ಗ್ರಾಪಂನ್ನು ಆಯ್ಕೆ ಮಾಡಿ ಕೆ.ಎಂ.ಉಡುಪ ಗ್ರಾಮ ಪುರಸ್ಕಾರದಿಂದ ಸಮ್ಮಾನಿಸಲಾಗುವುದು ಎಂದು ಮಹೇಶ್ ಉಡುಪ ತಿಳಿಸಿದರು.
ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎ.24ರ ರವಿವಾರ ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಜಿಪಂ ಸಿಇಓ ಡಾ.ನವೀನ್‌ಭಟ್ ವೈ, ಬೆಂಗಳೂರಿನ ಐಸಿಎಆರ್-ಎನ್‌ಐಎಎನ್‌ಪಿ ಸಂಸ್ಥೆಯ ನಿರ್ದೇಶಕ ಡಾ.ರಾಘವೇಂದ್ರ ಭಟ್ಟ ಹಾಗೂ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಸೌರ ವಿಜ್ಞಾನಿ ಹಾಗೂ ಸೆಲ್ಕೋದ ಸಂಸ್ಥಾಪಕ ಡಾ.ಹರೀಶ್ ಹಂದೆ ಅಲ್ಲದೇ ಶಾಸಕ ಕೆ.ರಘುಪತಿ ಭಟ್ ಪಾಲ್ಗೊಳ್ಳಲಿದ್ದಾರೆ.
ಮೂಲತ: ಬ್ರಹ್ಮಾವರ ಸಮೀಪದ ಮಂದಾರ್ತಿಯವರಾದ ಕೆ.ಎಂ.ಉಡುಪ ಕೃಷಿ ಪದವೀಧರರಾಗಿ ಟಿ.ಎ.ಪೈ ಅವರ ಪ್ರೇರಣೆಯಿಂದ ಬ್ಯಾಂಕಿಂಗ್ ಸೇವೆಗೆ ಸೇರಿದವರು. ಕೃಷಿ, ಬ್ಯಾಂಕಿಂಗ್, ಸೌರಶಕ್ತಿ, ಸ್ವಉದ್ಯೋಗ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಗ್ರಾಮೀಣಾಭಿವೃದ್ಧಿಯ ಚಿಂತನೆಯನ್ನು ನಡೆಸಿದವರು. ನಿವೃತ್ತಿಯ ನಂತರವೂ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮೂಲಕ ವಿವಿಧ ರೀತಿಯಲ್ಲಿ ಜನಸೇವೆಯನ್ನು ಮುಂದುವರಿಸಿದ ಅಪರೂಪದ ವ್ಯಕ್ತಿ.
ಕೆಎಂ ಉಡುಪರ ನೆನಪಿನಲ್ಲಿ ಅವರ ಧ್ಯೇಯೋದ್ದೇಶಗಳನ್ನು ಮುಂದುವರಿಸಿ ಕೊಂಡು ಹೋಗುವ ಉದ್ದೇಶದಿಂದ ಮಂದಾರ್ತಿಯಲ್ಲಿ ಕೆ.ಎಂ. ಉಡುಪ ಟ್ರಸ್ಟ್ ಪ್ರಾರಂಭಿಸಲಾಗಿದೆ. ಇದರ ಮೂಲಕ ಹಲವು ಜನಪರ ಕಾರ್ಯಕ್ರಮ ಗಳನ್ನು ನಡೆಸಲಾಗುವುದು ಎಂದು ಕೆ.ಮಹೇಶ್ ಉಡುಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಾರಕೂರಿನ ನಿವೃತ್ತ ಪ್ರಾಂಶುಪಾಲ ಕೆ.ಸೀತಾರಾಮ ಶೆಟ್ಟಿ ಹಾಗೂ ಮಾಧವ ಉಪಸ್ಥಿತರಿದ್ದರು.