ಎಂಜಿಎಂ ಕಾಲೇಜಿನಲ್ಲಿ ಚಿಟ್ಟೆ ಪಾರ್ಕ್‌ಗೆ ಶಂಕುಸ್ಥಾಪನೆ

ಉಡುಪಿ : ನಮ್ಮ ಸುತ್ತಮುತ್ತ ಉತ್ತಮ ಪರಿಸರ ವ್ಯವಸ್ಥೆ ರೂಪು ಗೊಳ್ಳುವಲ್ಲಿ ಚಿಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಚಿಟ್ಟೆ, ಪತಂಗಗಳು ಅವನತಿಯತ್ತ ಸಾಗುವುದನ್ನು ತಡೆಯಲು ಸುತ್ತಮುತ್ತ ಒಳ್ಳೆಯ ಗಿಡಮರಗಳನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಬೆಳುವಾಯಿಯ ಸಮ್ಮಿಲನ್ ಶೆಟ್ಟೀಸ್ ಬಟರ್‌ಫ್ಲೈ ಪಾರ್ಕ್‌ನ ಸ್ಥಾಪಕ ಸಮ್ಮಿಲನ್ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಮಹಾತ್ಮಗಾಂಧಿ ಸ್ಮಾರಕ ಕಾಲೇಜು, ಮಣಿಪಾಲ್ ಬರ್ಡಿಂಗ್ ಆ್ಯಂಡ್ ಕನ್ಸರ್‌ವೇಶನ್ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಕಾಲೇಜಿನ ಆವರಣದಲ್ಲಿ ನಿರ್ಮಿಸಲಿರುವ ‘ಸವಿತಾ ಶಾಸ್ತ್ರಿ ಬಟರ್‌ಫ್ಲೈ ಪಾರ್ಕ್’ಗೆ ಗುರುವಾರ ಸಂಜೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತಿದ್ದರು.
ಎಂಜಿಎಂ ಕಾಲೇಜಿನ ಪರಿಸರ ಚಿಟ್ಟೆ, ಪಕ್ಷಿ ಸಂಕುಲಗಳಿಗೆ ಪೂರಕವಾಗಿ ರೂಪುಗೊಂಡಿದ್ದು, ಚಿಟ್ಟೆಗಳ ಅಗತ್ಯತೆ, ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಆಶಯದಿಂದ ಚಿಟ್ಟೆ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದವರು ಹೇಳಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕ್, ಮಣಿಪಾಲ ಇಸಾ ಟೆಕ್ನಲಾಜೀಸ್‌ನ ಡಾ.ಪ್ರಭಾಕರ್ ಶಾಸ್ತ್ರಿ, ಎಂಜಿಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ವಿಶ್ವನಾಥ್ ಪೈ, ಮಣಿಪಾಲ ಬರ್ಡರ್ಸ್ ಕ್ಲಬ್‌ನ ತೇಜಸ್ವಿ ಎಸ್. ಆಚಾರ್ಯ, ವೃಂದಲತ್, ಮಣಿಪಾಲ್ ಯೂನಿವರ್ಸಲ್ ಪ್ರೆಸ್‌ನ ಮುಖ್ಯ ಸಂಪಾದಕಿ ಡಾ. ನೀತಾ ಇನಾಮ್‌ದಾರ್ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ವನಿತಾ ಟಿ. ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು. ಎಂಜಿಎಂ ಕಾಲೇಜಿನ ೨೦ ಸೆಂಟ್ಸ್ ಜಾಗದಲ್ಲಿ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇಲ್ಲಿ ಪೂರಕ ಸಸ್ಯಗಳನ್ನು ಬೆಳೆಸಿ ಚಿಟ್ಟೆಗಳ ಸಂರಕ್ಷಣೆ ಮಾಡಲಾಗುವುದು. ಇದು ವಿದ್ಯಾರ್ಥಿ ಗಳಿಗೆ ಶೈಕ್ಷಣಿಕವಾಗಿ ಚಿಟ್ಟೆಗಳ ಮಹತ್ವ ತಿಳಿಯಲು ಸಹಕಾರಿಯಾಗಲಿದೆ.







