ಬೈಕ್- ಕಾರು ಅಪಘಾತ: ಗಾಯಾಳು ಯುವಕ ಮೃತ್ಯು

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಬೇರಿಕೆ ಎಂಬಲ್ಲಿ ಐದು ದಿನಗಳ ಹಿಂದೆ ನಡೆದ ಬೈಕ್ ಹಾಗೂ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸಹ ಸವಾರ ಬೀತಲಪ್ಪು ನಿವಾಸಿ ವರ್ಷಿತ್ (17) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಎ.16ರಂದು ಸಂಜೆ ಬೇರಿಕೆ ಎಂಬಲ್ಲಿ ನೆಕ್ಕಿಲಾಡಿಯಿಂದ ಶಾಂತಿನಗರ ಕಡೆ ತೆರಳುತ್ತಿದ್ದ ಬೈಕ್ ಹಾಗೂ ಶಾಂತಿನಗರ ಕಡೆಯಿಂದ ಉಪ್ಪಿನಂಗಡಿ ಕಡೆ ಬರುತ್ತಿದ್ದ ಕಾರಿನ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿತ್ತು. ಘಟನೆಯಿಂದ ಬೈಕ್ ಸವಾರ ಬೆಳ್ಳಿಪ್ಪಾಡಿ ಗ್ರಾಮದ ನೆಕ್ಕರೆ ನಿವಾಸಿ ಅಶ್ವಥ್ (17) ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರ ವರ್ಷಿತ್ ಗಂಭೀರ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎ.21ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಬಡ ಕಾರ್ಮಿಕ ಕುಟುಂಬ ಸುಂದರ ಹಾಗೂ ಬಬಿತಾ ದಂಪತಿಗೆ ವರ್ಷಿತ್ ಓರ್ವನೇ ಪುತ್ರನಾಗಿದ್ದಾನೆ. ಈತನ ತಾಯಿ ಕೂಡಾ ಅನಾರೋಗ್ಯ ಪೀಡಿತರಾಗಿದ್ದು, ತಂದೆಯ ದುಡಿಮೆಯೇ ಇವರಿಗೆ ಇವರ ಕುಟುಂಬಕ್ಕೆ ಜೀವನಾಧಾರವಾಗಿತ್ತು. ವರ್ಷಿತ್ ಕಾಲೇಜು ರಜಾ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ಮನೆಯ ಜವಾಬ್ದಾರಿ ನಿರ್ವಹಿಸಲು ನೆರವಾಗುತ್ತಿದ್ದ. ವರ್ಷಿತ್ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ