ದಿಲ್ಲಿಯಲ್ಲಿ ಕೋಮುಗಲಭೆಗಳು ನಡೆದಾಗಲೆಲ್ಲಾ ಮೂಕ ಪ್ರೇಕ್ಷಕನಾಗುವ ಆಮ್ ಆದ್ಮಿ ಸರಕಾರ
telegraphindia.com ವರದಿ

ಹೊಸದಿಲ್ಲಿ: ಕಳೆದ ಶನಿವಾರ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಗಲಭೆಗಳ ಸಂದರ್ಭ ಆಪ್ ಸರಕಾರ ಮೂಕವೀಕ್ಷಕನಾಗಿ ಉಳಿದುಕೊಂಡಿತ್ತು. ಸಂಬಂಧವೇ ಇಲ್ಲ ಎಂಬಂತೆ ಉಳಿಯುವ ತನ್ನ ಕಾರ್ಯತಂತ್ರವು ಫಲ ನೀಡುತ್ತಿದೆ ಮತ್ತು ಬಿಜೆಪಿ ನಾಯಕರ ನಿರಂತರ ಪ್ರಚೋದನಾಕಾರಿ ಹೇಳಿಕೆಗಳ ಹೊರತಾಗಿಯೂ ಉದ್ವಿಗ್ನತೆ ಕಡಿಮೆಯಾಗುತ್ತಿದೆ ಎನ್ನುವುದು ಅದರ ನಂಬಿಕೆಯಾಗಿದೆ.
ಹನುಮ ಜಯಂತಿ ಮೆರವಣಿಗೆ ಸಂದರ್ಭ ಘರ್ಷಣೆಗಳು ನಡೆದಿದ್ದ ಜಹಾಂಗೀರ್ಪುರಿ ಪ್ರದೇಶಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಥವಾ ಅವರ ಸಂಪುಟದ ಯಾವುದೇ ಸಚಿವರು ಈವರೆಗೆ ಭೇಟಿ ನೀಡಿಲ್ಲ.
‘2020ರಲ್ಲಿ ಮತ್ತು ಈಗ ನಡೆದಿರುವ ಗಲಭೆಗಳ ಸಂದರ್ಭ ಘಟನಾ ಸ್ಥಳಕ್ಕೆ ಭೇಟಿ ನೀಡುವ ಮೂಲಕ ದೂರದರ್ಶನದಲ್ಲಿ ಕೊಂಚ ಪ್ರಚಾರ ಪಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದು ನಮ್ಮ ನಿಲುವಾಗಿದೆ. ಬಹುಸಂಖ್ಯೆಯ ಹಿಂದುಗಳು ಮುಸ್ಲಿಮರನ್ನು ದ್ವೇಷಿಸುವುದಿಲ್ಲ, ಆದರೆ ಜಾತ್ಯತೀತ ಪಕ್ಷಗಳು ತುಷ್ಟೀಕರಣದಲ್ಲಿ ತೊಡಗಿವೆ ಎಂಬ ಪ್ರಚಾರಕ್ಕೆ ಅವರು ಸುಲಭವಾಗಿ ಬಲಿಯಾಗುತ್ತಾರೆ. ನಾವು ಸಮುದಾಯವೊಂದರ ಪರವಾಗಿದ್ದೇವೆ ಎಂಬ ಭಾವನೆಯನ್ನು ಮೂಡಿಸುವ ಮೂಲಕ ಬಿಜೆಪಿಯು ಪರಿಸ್ಥಿತಿಯ ರಾಜಕೀಯ ಲಾಭ ಪಡೆಯಲು ನಾವು ಅವಕಾಶ ನೀಡುವುದಿಲ್ಲ’ ಎಂದು ಹೇಳಿದ ಆಪ್ ನಾಯಕರೋರ್ವರು, ‘ಜಹಾಂಗೀರ್ಪುರದಲ್ಲಿಯ ಹಿಂಸಾಚಾರಗಳ ವೈರಲ್ ವೀಡಿಯೊಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ನಾವು ಚಿಂತನ-ಮಂಥನ ನಡೆಸಿದ್ದೇವೆ. ಏನು ನಡೆಯುತ್ತಿದೆ ಎನ್ನುವುದನ್ನು ಕೇವಲ ವರದಿ ಮಾಡಲು ಮತ್ತು ಈ ಅಪರಾಧಗಳಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೇಗೆ ಹೊಣೆಗಾರರಾಗಿದ್ದಾರೆ ಎನ್ನುವುದನ್ನು ಬಹುಸಂಖ್ಯಾತರಿಗೆ ತಿಳಿಸಲು ನಾವು ವಿವೇಚನಾಯುಕ್ತ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ, ಏಕೆಂದರೆ ಶಾ ಅವರ ಪೊಲೀಸರು ಗಲಭೆಯನ್ನು 10 ನಿಮಿಷಗಳಲ್ಲಿ ನಿಲ್ಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದು ಉಲ್ಬಣಗೊಂಡರೆ ನಾವು ಶಾಂತಿ ಜಾಥಾಗಳನ್ನು ನಡೆಸಬಹುದು’ ಎಂದರು.
ಘರ್ಷಣೆಗಳಿಗೆ ಬಿಜೆಪಿಯನ್ನು ಹೊಣೆಯಾಗಿಸಿದ ಆಪ್ ಮುಖ್ಯ ವಕ್ತಾರ ಸೌರಭ ಭಾರದ್ವಾಜ ಅವರು ಇದಕ್ಕೆ ವಿರುದ್ಧವಾಗಿ ಹಿಂದುಯೇತರರೂ ಆಯೋಜನೆಗೆ ನೆರವಾಗಿದ್ದ ಮತ್ತು ಶಾಂತಿಯುತವಾಗಿ ನಡೆದಿದ್ದ ತನ್ನ ಪಕ್ಷದ ಹನುಮ ಜಯಂತಿ ಶೋಭಾಯಾತ್ರೆಯನ್ನು ಉಲ್ಲೇಖಿಸಿದರು. ಪೊಲೀಸರಿಂದ ಬಂಧಿಸಲ್ಪಟ್ಟಿರುವ ರೌಡಿ ಶೀಟರ್ ಮುಹಮ್ಮದ್ ಅನ್ಸಾರ್ ಪರಸ್ಪರರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಎನ್ನಲಾಗಿರುವ ಚಿತ್ರಗಳನ್ನು ಬಿಜೆಪಿ ಮತ್ತು ಆಪ್ ಬಿಡುಗಡೆಗೊಳಿಸಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಭಾರದ್ವಾಜ, ರಾಮನವಮಿಯಿಂದ ಹನುಮ ಜಯಂತಿಯವರೆಗೆ ಅವರು (ಬಿಜೆಪಿ) ಏಳು ರಾಜ್ಯಗಳಲ್ಲಿ ದಂಗೆಗಳ ರೂವಾರಿಗಳಾಗಿದ್ದರು. ಪ್ರತಿ ದಂಗೆಯೂ ಬಿಜೆಪಿಗೆ ಮಾತ್ರ ಲಾಭ ನೀಡುತ್ತದೆ. ಅದರ ನಾಯಕರು, ಕೇಂದ್ರ ಸಚಿವರು, ರಾಷ್ಟ್ರೀಯ ಮತ್ತು ರಾಜ್ಯ ಅಧ್ಯಕ್ಷರು ಮತ್ತು ಸಂಸದರು ಈ ದಂಗೆಗಳಿಂದ ರಾಜಕೀಯ ಲಾಭಗಳನ್ನು ಗಳಿಸುತ್ತಿದ್ದಾರೆ ಎಂದರು.
ಎರಡೂ ಧರ್ಮಗಳಿಗೆ ಸೇರಿದ ಗೂಂಡಾಗಳು ಪ್ರದೇಶವೊಂದರಲ್ಲಿ ಸೇರುತ್ತಾರೆ ಮತ್ತು ಪೊಲೀಸರ ಎದುರೇ ಖಡ್ಗಗಳು ಮತ್ತು ಬಂದೂಕುಗಳನ್ನು ಝಳಪಿಸುತ್ತಾರೆ. ಪೊಲೀಸರೇಕೆ ಅವರನ್ನು ಬಂಧಿಸುವುದಿಲ್ಲ? ಏಕೆಂದರೆ ಇದು ಬಿಜೆಪಿ ಕಚೇರಿಯಲ್ಲಿ ರೂಪಿಸಲಾದ ತಂತ್ರವಾಗಿದೆ. ಪೊಲೀಸರ ಪಾತ್ರವನ್ನು ಮೊದಲೇ ನಿರ್ಧರಿಸಲಾಗಿರುತ್ತದೆ, ಅವರು ಕೇವಲ ನೋಡುತ್ತ ನಿಲ್ಲಬೇಕೇ ಹೊರತು ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ ಎಂದು ಭಾರದ್ವಾಜ ಹೇಳಿದರು.
ಬಹುಸಂಖ್ಯಾತರಲ್ಲಿಯ ಭೀತಿಯನ್ನು ನಿವಾರಿಸುವುದು ಮುಖ್ಯವಾಗಿದೆ ಎಂದು ಹೇಳಿದ ಆಪ್ ನಾಯಕರೋರ್ವರು,‘ ಸದ್ಯಕ್ಕೆ ಅಲ್ಪಸಂಖ್ಯಾತರಲ್ಲಿ ಮನೆ ಮಾಡಿರುವ ಭೀತಿಯನ್ನು ಶಮನಿಸಲು ನಾವು ಏನೂ ಮಾಡುವಂತಿಲ್ಲ. 2020ರ ಗಲಭೆಗಳ ಬಳಿಕ ಅದನ್ನು ಮಾಡಲು ಅವಕಾಶಗಳಿದ್ದವು, ಆದರೆ ಒಂದು ಸಮಾಜವಾಗಿ ನಾವು ಕೋಮುವಾದದ ವಿರುದ್ಧ ಹೋರಾಟಕ್ಕೆ ಕಠಿಣ ಪರಿಶ್ರಮವನ್ನು ಹಾಕಲು ಸಿದ್ಧರಿಲ್ಲ. ದಿಲ್ಲಿ ವಿಧಾನಸಭೆ ಮತ್ತು ದಿಲ್ಲಿ ಅಲ್ಪಸಂಖ್ಯಾತರ ಆಯೋಗ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದವು. ಆದರೆ ಸಾಂಕ್ರಾಮಿಕ ಮತ್ತು ರಾಜಕೀಯ ಹಗ್ಗಜಗ್ಗಾಟ ಈ ನಿಟ್ಟಿನಲ್ಲಿ ಪ್ರಗತಿಗೆ ಅಡ್ಡಿಯಾಗಿದ್ದವು’ ಎಂದರು.
‘ಕೋಮು ಹಿಂಸಾಚಾರವನ್ನು ತಡೆಯುವಲ್ಲಿ ಪ್ರತಿಯೊಂದೂ ಸಂಸ್ಥೆಯು ವಿಫಲವಾಗಿದೆ,ಏಕೆಂದರೆ ಹಾಗೆ ಮಾಡುವ ನಿಜವಾದ ಶಕ್ತಿಯಿರುವುದು ಪೊಲೀಸರಿಗೆ ಮಾತ್ರ. ನಮ್ಮ ಶಾಂತಿ ಸಮಿತಿಗಳು ಕೆಲಸ ಮಾಡಿದರೂ ದಿಲ್ಲಿಯಲ್ಲಿ ಅಪರಾಧ ತನಿಖೆಯ ಮೇಲೆ ಕೇಂದ್ರವು ಏಕಸ್ವಾಮ್ಯವನ್ನು ಹೊಂದಿರುವುದರಿಂದ ಮತ್ತು ಕೋಮು ಗಲಭೆಗಳನ್ನು ನಿಯಂತ್ರಿಸಲು ನ್ಯಾಯಾಲಯಗಳು ಅಸಮರ್ಥವಾಗಿರುವುದರಿಂದ ಜನರಿಗೆ ಯಾವುದೇ ಮಹತ್ವದ ನ್ಯಾಯದ ಭರವಸೆ ಕಾಣುವುದಿಲ್ಲ. ಬಡತನವು ಮೂಲಕಾರಣ ಎನ್ನುವುದು ನಮಗೆ ಗೊತ್ತು. ಆರ್ಥಿಕ ಬಿಕ್ಕಟ್ಟು ಹೆಚ್ಚಿದಷ್ಟೂ ರ್ಯಾಲಿಗಳಿಗೆ ಯುವಜನರು ಮುಗಿಬೀಳುವುದು ಹೆಚ್ಚುತ್ತದೆ ಮತ್ತು ಅಲ್ಲಿ ದಂಗೆಯೇಳಲು ಅವರಿಗೆ ಶಸ್ತ್ರಗಳನ್ನು ನೀಡಲಾಗುತ್ತದೆ ’ ಎಂದು ಆಪ್ ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರೋರ್ವರು ಹೇಳಿದರು.
ಆಪ್ ಎರಡೂ ಕಡೆಗಳಲ್ಲಿ ಇಕ್ಕಟ್ಟಿಗೆ ಸಿಲುಕಿದೆ. ಆಪ್ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ದಂಗೆಕೋರರನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ಯಾವುದೇ ಆಧಾರವಿಲ್ಲದೆ ಆರೋಪಿಸುತ್ತಿದ್ದರೆ, ಆಪ್ ಕೋಮು ಹಿಂಸಾಚಾರದ ಬಗ್ಗೆ ಕಣ್ಣು ಮುಚ್ಚಿಕೊಂಡಿದೆ ಎಂದು ಉದಾರವಾದಿಗಳು ಆರೋಪಿಸುತ್ತಿದ್ದಾರೆ.
ಕೃಪೆ: telegraphindia.com







