ಅಫ್ಘಾನ್: ಮಸೀದಿಯಲ್ಲಿ ಸ್ಫೋಟ; 5 ಮಂದಿ ಮೃತ್ಯು, 50 ಮಂದಿಗೆ ಗಾಯ

photo courtesy:twitter/@ImamRezaEN
ಕಾಬೂಲ್, ಎ.21: ಉತ್ತರ ಅಫ್ಘಾನಿಸ್ತಾನದ ಮಝರ್-ಎ- ಶರೀಫ್ ನಗರದಲ್ಲಿನ ಮಸೀದಿಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು ಸುಮಾರು 50 ಮಂದಿ ಗಾಯಗೊಂಡಿರುವುದಾಗಿ ತಾಲಿಬಾನ್ ಕಮಾಂಡರ್ ಹೇಳಿದ್ದಾರೆ.
ಪವಿತ್ರ ರಮಝಾನ್ ತಿಂಗಳ ಪ್ರಾರ್ಥನೆಗೆಂದು ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಒಟ್ಟು ಸೇರಿದ್ದರು. ಈ ಸಂದರ್ಭ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡಿದ್ದು ಮಸೀದಿಯ ಹೊರವಲಯದಲ್ಲಿರುವ ಅಂಗಡಿಯ ಕಿಟಕಿಯ ಗಾಜು ಕೂಡಾ ಪುಡಿಯಾಗಿದೆ.
ಸ್ಫೋಟದಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು 50 ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಪ್ರಾಂತೀಯ ಆರೋಗ್ಯ ಪ್ರಾಧಿಕಾರದ ವಕ್ತಾರ ಝಿಯಾ ಝೆಂದಾನಿ ಹೇಳಿದ್ದಾರೆ.
ಮೃತದೇಹಗಳನ್ನು ಆಂಬ್ಯುಲೆನ್ಸ್ ಮತ್ತು ಕಾರಿನಲ್ಲಿ ಆಸ್ಪತ್ರೆಗೆ ತರಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮಝರ್-ಎ-ಶರೀಫ್ನ ಪ್ರಧಾನ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ಘ್ವಾಸುದ್ದೀನ್ ಅನ್ವಾರಿ ಹೇಳಿದ್ದಾರೆ. ಯಾವುದೇ ಸಂಘಟನೆ ಇದುವರೆಗೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ ಎಂದು ವರದಿಯಾಗಿದೆ.
ಶಿಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪಶ್ಚಿಮ ಕಾಬೂಲ್ ನ ಹಝಾರಾ ಪ್ರದೇಶದ ಹೈಸ್ಕೂಲ್ ನಲ್ಲಿ 2 ದಿನದ ಹಿಂದೆ ನಡೆದಿದ್ದ ಸ್ಫೋಟದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು ಇತರ 11 ಮಂದಿ ಗಾಯಗೊಂಡಿದ್ದರು. ಅಫ್ಘಾನ್ ನಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಶಿಯಾ ಸಮುದಾಯವನ್ನು ಗುರಿಯಾಗಿಸಿ ಐಸಿಸ ನಂತಹ ಸುನ್ನಿ ಸಂಘಟನೆ ನಿರಂತರ ದಾಳಿ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







