ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಿಂದ ಮತ್ತೆ ವಾಯುದಾಳಿ

photo courtesy:twitter
ಜೆರುಸಲೇಂ, ಎ.21: ಈ ವಾರದಲ್ಲಿ 2ನೇ ಬಾರಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನ ಯುದ್ಧವಿಮಾನಗಳು ದಾಳಿ ನಡೆಸಿವೆ. ಆದರೆ ಈ ರೀತಿಯ ದಾಳಿಯು ಪೆಲೆಸ್ತೀನೀಯರ ಮನೋಬಲವನ್ನು ಇನ್ನಷ್ಟು ದೃಢಗೊಳಿಸುತ್ತದೆ ಎಂದು ಹಮಾಸ್ ಸಂಘಟನೆ ಪ್ರತಿಕ್ರಿಯಿಸಿದೆ. ಕೇಂದ್ರ ಗಾಝಾಪಟ್ಟಿಯಲ್ಲಿನ ಭೂಗತ ಕಟ್ಟಡದಲ್ಲಿ ರಾಕೆಟ್ ಇಂಜಿನ್ಗಳನ್ನು ಉತ್ಪಾದಿಸುತ್ತಿದ್ದ ಕಾರ್ಖಾನೆಯನ್ನು ಗುರಿಯಾಗಿಸಿ ಬುಧವಾರ ಮಧ್ಯರಾತ್ರಿ ಈ ದಾಳಿ ನಡೆದಿದೆ. ಪ್ರಾಣಹಾನಿ ಅಥವಾ ಆಸ್ತಿಹಾನಿಯ ಬಗ್ಗೆ ತಕ್ಷಣ ಮಾಹಿತಿ ಲಭಿಸಿಲ್ಲ ಎಂದು ಇಸ್ರೇಲ್ ಹೇಳಿದೆ. ಆದರೆ ಈ ದಾಳಿಯಲ್ಲಿ ಅಲ್-ಬುರೆಜಿ ವಲಸಿಗರ ಶಿಬಿರದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಅಲ್ಜಝೀರಾ ವರದಿ ಮಾಡಿದೆ.
ಇದಕ್ಕೂ ಮುನ್ನ, ಈ ಪ್ರದೇಶದಿಂದ ಉಡಾಯಿಸಿದ ಕ್ಷಿಪಣಿಯೊಂದು ಇಸ್ರೇಲ್ ನ ದಕ್ಷಿಣ ಭಾಗಕ್ಕೆ ಅಪ್ಪಳಿಸಿ ಹಲವು ಮನೆಗಳಿಗೆ ಹಾನಿಯಾಗಿದೆ. ಬಳಿಕ ಮತ್ತೂ 4 ರಾಕೆಟ್ಗಳು ಗಾಝಾದಿಂದ ಹಾರಿಬಂದಿದೆ. ಅವನ್ನು ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ ಎಂದು ಇಸ್ರೇಲ್ ನ ರಕ್ಷಣಾ ಇಲಾಖೆ ಹೇಳಿದೆ.ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯು ಇಸ್ರೇಲ್ನ ಆಕ್ರಮಣವನ್ನು ತಡೆಯಲು ಮತ್ತು ಜೆರುಸಲೇಂ ಮತ್ತದರ ಜನರಿಗೆ ನೆರವಾಗುವ ಪೆಲೆಸ್ತೀನೀಯರ ನಿರ್ಧಾರವನ್ನು ಇನ್ನಷ್ಟು ದೃಢಗೊಳಿಸುತ್ತದೆ ಎಂದು ಗಾಝಾದ ಆಡಳಿತ ನಿರ್ವಹಿಸುತ್ತಿರುವ ಹಮಾಸ್ ಹೇಳಿದೆ.







