ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ಆಗ್ರಹಿಸಿ ಬೃಹತ್ ಕಾರ್ಮಿಕ ಭವನ ಚಲೋ

ಬೆಂಗಳೂರು, ಎ.21: ಬಿಬಿಎಂಪಿ ಮತ್ತು ಜಲಮಂಡಳಿಯ ಸಾವಿರಾರು ಕಾರ್ಮಿಕರು ಹಲವಾರು ವರ್ಷಗಳಿಂದ ಗುತ್ತಿಗೆ ಪದ್ಧತಿಯಲ್ಲಿಯೇ ಕೆಲಸ ಮಾಡುತ್ತಾ ಬಂದಿದ್ದಾರೆ. ಮೂಲಭೂತ ಹಕ್ಕುಗಳು ದಕ್ಕಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು ಎಂದು ಆಗ್ರಹಿಸಿ ಕಾರ್ಮಿಕ ಭವನ ಚಲೋ ಹೋರಾಟ ನಡೆಸಲಾಯಿತು.
ನಗರವನ್ನು ಸ್ವಚ್ಛ, ಸುಂದರವಾಗಿಡಲು ಎಡಬಿಡದೆ ಶ್ರಮಿಸುತ್ತಿರುವ ಬಿಬಿಎಂಪಿಯ ಪೌರ ಕಾರ್ಮಿಕರು ಮತ್ತು ಈಡೀ ಬೆಂಗಳೂರಿನ ಪ್ರತಿ ಮನೆಗೆ ನೀರನ್ನು ತಲುಪಿಸುವ ಮತ್ತು ಡ್ರೈನೇಜ್ ವ್ಯವಸ್ಥೆಯನ್ನು ನಿರ್ವಹಿಸುವ ಜಲ ಮಂಡಳಿಯ ಗುತ್ತಿಗೆ ಕಾರ್ಮಿಕರು ಹಲವಾರು ವರ್ಷಗಳಿಂದ ಗುತ್ತಿಗೆ ಪದ್ಧತಿಯಲ್ಲಿಯೇ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಸಹ ಕಾರ್ಮಿಕರಿಗೆ ಇನ್ನೂ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿದೆ ಮತ್ತು ನಿಕೃಷ್ಟ ವೇತನವನ್ನು ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮೂಲಭೂತ ಹಕ್ಕುಗಳು ದಕ್ಕಬೇಕು ಮತ್ತುಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು ಎಂದು ಆಗ್ರಹಿಸಿ ಕಾರ್ಮಿಕ ಭವನ ಚಲೋ ಹೋರಾಟ ನಡೆಸಲಾಯಿತು.
ಬಿಬಿಎಂಪಿ ಮತ್ತು ಜಲಮಂಡಳಿಯ ಸಾವಿರಾರು ಕಾರ್ಮಿಕರು ಕಾರ್ಮಿಕರ ಇಲಾಖೆಯನ್ನು ಮುತ್ತಿಗೆ ಹಾಕಿ ಕೂತರು. ಹೋರಾಟದ ಸ್ಥಳಕ್ಕೆ ಬಂದ ಉಪ ಕಾರ್ಮಿಕ ಆಯುಕ್ತರು ಮನವಿಯನ್ನು ಸ್ವೀಕರಿಸಿದರು. ಮೇ ತಿಂಗಳ ಮೊದಲ ವಾರದಲ್ಲಿ ಜಂಟಿ ಸಭೆಯನ್ನು ನಿಗದಿ ಮಾಡುತ್ತೇವೆ ಎಂದು ಒಪ್ಪಿಕೊಂಡರು.
ಹೋರಾಟದ ನೇತೃತ್ವವನ್ನು ಕಾಂ. ಬಾಲನ್, ರವಿ ಮೋಹನ್, ಸತೀಷ್ ಅರವಿಂದ್, ವರದರಾಜೇಂದ್ರ ಮುಂತಾದವರು ವಹಿಸಿಕೊಂಡಿದ್ದರು. ವಕೀಲ ಹರೀರಾಂ ಅವರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ ಗಮನ ಸೆಳೆದರು.







