ಹಳೆಯಂಗಡಿ; ಕಾರು - ಬಸ್ ಮುಖಾಮುಖಿ ಢಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು
ಓರ್ವನಿಗೆ ಗಂಭೀರ ಗಾಯ

ಹಳೆಯಂಗಡಿ, ಎ.21: ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾವಂಜೆ ರಾ.ಹೆ. 66ರಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೃತಪಟ್ಟವರನ್ನು ವಸಂತ (64), ಬುಜಂಗ (62) ಹಾಗೂ ಗಂಭೀರ ಗಾಯಗೊಂಡವರನ್ನು ಕೆ. ಬಾಲಕೃಷ್ಣ ಎಂದು ತಿಳಿದು ಬಂದಿದೆ. ಇವರೆಲ್ಲರೂ ಮುಕ್ಕದ ಪಡ್ರೆ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ವಸಂತ, ಬುಜಂಗ ಮತ್ತು ಬಾಲಕೃಷ್ಣ ಅವರು ಹಳೆಯಂಗಡಿ ಪಂಡಿತ್ ಹರಿಭಟ್ ರಸ್ತೆಯಾಗಿ ರಾ.ಹೆದ್ದಾರಿ 66ರಲ್ಲಿ ವಿರುದ್ಧ ದಿಕ್ಕಿನಲ್ಲಿ ತಮ್ಮ ಮಾರುತಿ ಓಮ್ನಿಯಲ್ಲಿ ಬಂದು ಮುಕ್ಕ ಪಡ್ರೆಕಡೆ ತಿರುವ ಪಡೆಯುತ್ತಿದ್ದಾಗ ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಕಾರಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದ ವಸಂತ ಮತ್ತು ಬುಜಂಗ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಲಕೃಷ್ಣ ಅವರಿಗೆ ಗಂಭೀರ ಗಾಯವಾಗಿದೆ.
ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.





