"ಅಧಿಕಾರಿ ತಮ್ಮ ವಿವೇಚನೆ ಬಳಸಿದ್ದಾರೆಯೇ?": ದಿಲ್ಲಿ ದ್ವೇಷ ಭಾಷಣ ಕುರಿತು ಪೊಲೀಸರ ಅಫಿಡವಿಟ್ಗೆ ಸುಪ್ರೀಂ ಅಸಮಾಧಾನ

ಹೊಸದಿಲ್ಲಿ: ಹಿಂದು ಯುವ ವಾಹಿನಿ ಸಂಘಟನೆಯು ರಾಜಧಾನಿಯಲ್ಲಿ ಕಳೆದ ವರ್ಷದ ಡಿಸೆಂಬರ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದ್ವೇಷದ ಭಾಷಣ ನೀಡಲಾಗಿಲ್ಲ ಎಂದು ತಿಳಿಸಿ ತಾನು ಸಲ್ಲಿಸಿದ್ದ ಅಫಿಡವಿಟ್ ಅನ್ನು 'ಮರುಪರಿಶೀಲಿಸುವುದಾಗಿ' ದಿಲ್ಲಿ ಪೊಲೀಸರು ಶುಕ್ರವಾರ ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ. ಅಫಿಡವಿಟ್ ಕುರಿತಂತೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿದ ನಂತರ ದಿಲ್ಲಿ ಪೊಲೀಸರ ಪರ ವಕೀಲರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಮೇಲಿನಂತೆ ಹೇಳಿದ್ದಾರಲ್ಲದೆ ಹೊಸ ಅಫಿಡವಿಟ್ ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಅಫಿಡವಿಟ್ ಸಿದ್ಧಪಡಿಸಲು ಆಧಾರವಾಗಿದ್ದ ಓಖ್ಲಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸಲ್ಲಿಸಿದ್ದ ತನಿಖಾ ವರದಿಯನ್ನು ಯಾವುದೇ ಮೇಲಧಿಕಾರಿ ಪರಿಶೀಲಿಸಿದ್ದಾರೆಯೇ ಎಂದು ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿದೆ.
"ಯಾವುದೇ ಹಿರಿಯ ಅಧಿಕಾರಿ ಇದನ್ನು ಪರಿಶಿಲಿಸಿದ್ದಾರೆಯೇ? ಕೋರ್ಟ್ ಮುಂದೆ ಸಲ್ಲಿಕೆಯಾಗುವ ಅಫಿಡವಿಟ್ನಲ್ಲಿ ಇಂತಹ ನಿಲುವು ತಳೆಯಬಹುದೇ? ಈ ಅಫಿಡವಿಟ್ ಅನ್ನು ದಿಲ್ಲಿಯ ಉಪ ಪೊಲೀಸ್ ಆಯುಕ್ತರು ಸಲ್ಲಿಸಿದ್ದೇ? ಎಂದು ಜಸ್ಟಿಸ್ ಖಾನ್ವಿಲ್ಕರ್ ಪ್ರಶ್ನಿಸಿದ್ದಾರೆ. "ಅವರು ಕೇವಲ ತನಿಖಾ ವರದಿಯನ್ನು ಭಟ್ಟಿ ಇಳಿಸಿದ್ದಾರೆಯೇ ಅಥವಾ ತಮ್ಮ ವಿವೇಚನೆ ಬಳಸಿದ್ದಾರೆಯೇ? ಅವರು ಸೂಕ್ಷ್ಮತೆಗಳನ್ನು ಅರ್ಥೈಸಿಕೊಂಡಿದ್ದಾರೆಂದು ನಂಬುತ್ತೇವೆ,'' ಎಂದು ಅವರು ಹೇಳಿದರು.
"ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಧರ್ಮ, ಗುಂಪು ಅಥವಾ ಜನಾಂಗದ ವಿರುದ್ಧ ದ್ವೇಷದ ಮಾತುಗಳನ್ನು ಆಡಲಾಗಿಲ್ಲ, ಭಾಷಣವು ಒಬ್ಬರ ಧರ್ಮವನ್ನು ಸಬಲೀಕರಣಗೊಳಿಸುವ ಹಾಗೂ ಅದರ ಅಸ್ತಿತ್ವಕ್ಕೆ ಅಪಾಯವುಂಟು ಮಾಡುವ ಶಕ್ತಿಗಳ ವಿರುದ್ಧ ಹೋರಾಡುವ ಕುರಿತಾಗಿತ್ತು ಹಾಗೂ ಯಾವುದೇ ಧರ್ಮದ ಕುರಿತಾಗಿ ನರಮೇಧದ ಕರೆಗೆ ಕಿಂಚಿತ್ತೂ ಸಂಬಂಧವಿಲ್ಲ,'' ಎಂದು ಅಫಿಡವಿಟ್ನಲ್ಲಿ ಹೇಳಲಾಗಿತ್ತು.
ದಿಲ್ಲಿಯಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮ ಹಾಗೂ ಹರಿದ್ವಾರದ ಧರ್ಮ ಸಂಸದ್ನಲ್ಲಿ ದ್ವೇಷದ ಭಾಷಣಗಳನ್ನು ನೀಡಲಾಗಿದೆ ಎಂಬ ಆರೋಪಗಳ ಕುರಿತು ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.