ಅಂಕಿ ಅಂಶಗಳೊಂದಿಗೆ ಸಭೆಗೆ ಹಾಜರಾಗಲು ಅಧಿಕಾರಿಗಳಿಗೆ ಸಚಿವ ಸುನಿಲ್ ಕುಮಾರ್ ಸೂಚನೆ

ಮಂಗಳೂರು : ಶಾಸಕರು, ಸಚಿವರು ಭಾಗವಹಿಸುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಅಂಕಿ ಅಂಶಗಳೊಂದಿಗೆ, ಪೂರ್ವ ತಯಾರಿಯೊಂದಿಗೆ ಹಾಜರಾಗಬೇಕು. ಸಭೆಯನ್ನು ಲಘುವಾಗಿ ಪರಿಗಣಿಸುವುದು ಬೇಡ. ಮಾತ್ರವಲ್ಲದೆ, ಗುತ್ತಿಗೆದಾರ ಹೇಳಿದಂತೆ ಅಧಿಕಾರಿಗಳು ಆಡಳಿತ ನಡೆಸುವುದು ಬೇಡ. ಸರಕಾರ ಹೇಳಿದ ಹಾಗೆ ಆಡಳಿತ ನಡೆಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸೂಚನೆ ನೀಡಿದ್ದಾರೆ.
ಅವರು ಶನಿವಾರ ಮಂಗಳೂರು ತಾಲೂಕಿನ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಡಿಪಿ ಸಭೆ ಬಳಿಕ ಶಾಸಕರು, ಸಚಿವರು ಫೀಲ್ಡ್‌ಗೆ ಭೇಟಿ ನೀಡಿದಾಗ ಪುಸ್ತಕದ ಅಂಕಿ ಅಂಶಗಳಿಗೂ ವಾಸ್ತವಾಂಶಗಳಿಗೂ ತಾಳೆಯಾಗದಿದ್ದರೆ ಅಕಾರಿಗಳೇ ನೇರ ಹೊಣೆ ಹೊರಬೇಕು. ಗುತ್ತಿಗೆದಾರ ಮಾತು ಕೇಳದಿದ್ದರೆ ಅದಕ್ಕೆ ಅಧಿಕಾರಿಗಳೇ ಜವಾಬ್ದಾರರು. ಗುತ್ತಿಗೆದಾರನೊಂದಿಗೆ ಶಾಮೀಲಾಗಿ ಆಡಳಿತವನ್ನು ನಡೆಸುವ ಅಗತ್ಯ ನಮಗಿಲ್ಲ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಅನೇಕ ಅಧಿಕಾರಿಗಳು ಸಭೆಯ ನೋಟಿಸ್ ಸಿಕ್ಕರೂ ಕಾರಣ ನೀಡದೆ ಸಭೆಗೆ ಗೈರು ಹಾಜರಾಗಿದ್ದಾರೆ. ಹಳೆ ಪದ್ಧತಿಯಂತೆ ಸಭೆ ನಡೆಸುವ ಅಗತ್ಯ ಇಲ್ಲ. ಇನ್ನೇನಿದ್ದರೂ ಅಧಿಕಾರಿಗಳು ಅಂಕಿ ಅಂಶಗಳೊಂದಿಗೆ ಸಭೆಗೆ ಹಾಜರಾಗಬೇಕು. ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ ಎಂದರು.
ಇದು ಚುನಾವಣೆ ವರ್ಷ. ಸರಕಾರದ ಪ್ರತಿ ಯೋಜನೆಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಸರಕಾರ ಯೋಜನೆಗಳನ್ನು ಕೊಟ್ಟರೂ ಅದನ್ನು ಪೂರ್ಣ ಮಾಡದೇ ಬೇಜವಾಬ್ದಾರಿಯಿಂದ ವರ್ತಿಸಿದರೆ ನಾವು ಸಹಿಸುವುದಿಲ್ಲ. ಮುಂಗಾರು ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಅಷ್ಟರ ಒಳಗಡೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ತಾಂತ್ರಿಕ ಸಮಸ್ಯೆಗಳಿದ್ದರೆ ಶಾಸಕರಿಗೆ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬಗೆಹರಿಸಿಕೊಳ್ಳಿ ಎಂದು ಸೂಚನೆ ನೀಡಿದರು.
ಹಿಜಾಬ್‌ಗೆ ಸಂಬಂಧಿಸಿ ಹೈಕೋರ್ಟ್ ತೀರ್ಪು ವಿರೋಧಿಸಿ ಬಂದ್ ಕರೆಕೊಟ್ಟ ವೇಳೆ ಕೆಲವು ಖಾಸಗಿ ಶಾಲೆಗಳನ್ನು ಕೂಡಾ ಬಂದ್ ಮಾಡಿಸಲಾಗಿತ್ತು. ಸರಕಾರದ ವ್ಯವಸ್ಥೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಪಡೆದು ಸರಕಾರದ ವಿರುದ್ಧವೇ ಕಾರ್ಯನಿರ್ವಹಿಸುವುದನ್ನು ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹಾ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ಸರಕಾರಿ ವ್ಯವಸ್ಥೆಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಅಂತಾದರೆ ಕಷ್ಟ. ಇಂತಹಾ ಮನಸ್ಥಿತಿ ಹೊಂದಿ ಶಾಲೆ ಮುಚ್ಚಿದ ಎಲ್ಲ ಆಡಳಿತ ಮಂಡಳಿಗಳಿಗೆ ತಕ್ಷಣ ನೋಟಿಸ್ ನೀಡಿ ಉತ್ತರ ಪಡೆಯಿರಿ. ಭವಿಷ್ಯದಲ್ಲಿ ಈ ರೀತಿ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರಕಾರಿ ವಿರೋಧಿ ಧೋರಣೆ ಪೋಸ್ಟ್ !
ಕೆಲವು ಸರಕಾರಿ ನೌಕರರು ಅದರಲ್ಲೂ ಮುಖ್ಯವಾಗಿ ಕೆಲವು ಶಿಕ್ಷಕರು ತಮ್ಮ ಮೊಬೈಲ್ ಸ್ಟೇಟಸ್‌ನಲ್ಲಿ ಹಾಗೂ ಜಾಲತಾಣಗಳಲ್ಲಿ ಸರಕಾರಿ, ಜನಪ್ರತಿನಿಗಳ ವಿರುದ್ಧದ ಧೋರಣೆಗಳುಳ್ಳ ಪೋಸ್ಟ್‌ಗಳನ್ನು ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಅಂತಹಾ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಅನೇಕ ಶಿಕ್ಷಕರು ಕೂಡಾ ಇಂತಹಾ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿರುವುದು ದುರದೃಷ್ಟಕರ. ಸರಕಾರಿ ನೌಕರರು ಜಾತಿ, ಧರ್ಮ, ರಾಜಕೀಯದ ಹೊರತಾಗಿ ಕರ್ತವ್ಯ ನಿರ್ವಹಿಸಬೇಕು. ಇದೇ ರೀತಿಯ ಮನಸ್ಥಿತಿ ಮುಂದುವರಿದರೆ ಕ್ರಮ ಅನಿವಾರ್ಯ ಎಂದು ಸಚಿವ ಸುನಿಲ್ ಕುಮಾರ್ ಎಚ್ಚರಿಸಿದರು.