ಉರ್ದು ಶಾಲೆ ಮುಚ್ಚುವ ಪ್ರಶ್ನೆಯೇ ಇಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಚಿಕ್ಕಮಗಳೂರು, ಎ.22: ರಾಜ್ಯದಲ್ಲಿ ಉರ್ದು ಶಾಲೆ ಸೇರಿದಂತೆ ಯಾವುದೇ ಶಾಲೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ, ವಿದ್ಯಾರ್ಥಿಗಳ ಕೊರತೆ ಇರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನ ಮಾಡಲಾಗುವುದು. ಶಿಕ್ಷಣದಲ್ಲಿ ರಾಜಕೀಯ ಇರಬಾರದು. ರಾಜಕೀಯದಿಂದಾಗಿ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಜ್ಯೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದ ವೀಕ್ಷಣೆ ನಡೆಸಿದ ಸಂದರ್ಭದಲ್ಲಿ, ರಾಜ್ಯಾದ್ಯಂತ ಉರ್ದು ಶಾಲೆ ಮುಚ್ಚುವ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಾವುದೇ ಶಾಲೆಗಳನ್ನು ಮುಚ್ಚುವ ಬಗ್ಗೆ ಚಿಂತನೆ ನಡೆಸಿಲ್ಲ. ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳು ಕಡಿಮೆ ಇರುವ ಶಾಲೆಗಳನ್ನು ಮಾದರಿ ಶಾಲೆ ಮಾಡುವ ದೃಷ್ಟಿಯಿಂದ ವಿಲೀನ ಮಾಡಲಾಗುವುದು ಎಂದರು.
ಉತ್ತಮ ಶಿಕ್ಷಣ ನೀಡಬೇಕಾದಲ್ಲಿ ಮಕ್ಕಳ ಜೊತೆ ಮಕ್ಕಳು ಕಲಿಯುತ್ತಾ ಬೆಳೆಯಬೇಕು, ಇದು ಶಿಕ್ಷಕರಿಗೂ ಕಲಿಸಲು ಅನುಕೂಲವಾಗುತ್ತದೆ. ರಾಜ್ಯದಲ್ಲಿ 2700ಕ್ಕೂ ಹೆಚ್ಚು ಸಿಂಗಲ್ ಪಂಚಾಯತ್ ಗಳಿದ್ದು, ಇಂತಹ ಗ್ರಾ.ಪಂ ವ್ಯಾಪ್ತಿಯಲ್ಲಿ ಐದಾರು ಶಾಲೆಗಳು ಇದೆ. ಇಲ್ಲಿ ಮಕ್ಕಳು ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ವಿಲೀನ ಮಾಡಿ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಕನ್ನಡ ಶಾಲೆ,ಉರ್ದು,ಮರಾಠ, ತಮಿಳು ಶಾಲೆ ಯಾವುದಿದ್ದರೂ ವಿಲೀನ ಮಾಡಲಾಗುವುದು, ಆದರೆ ಯಾವುದೇ ಶಾಲೆಗಳನ್ನು ಮುಚ್ಚುವ ಚಿಂತನೆ ಇಲ್ಲ ಎಂದರು
ಇದೇ ವೇಳೆ ಪಿಯುಸಿ ಪರೀಕ್ಷೆ ಕುರಿತು ಮಾತನಾಡಿದ ಅವರು, ಮಕ್ಕಳು ತುಂಬಾ ವಿಶ್ವಾಸದಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬು ಆಲ್ ದಿ ಬೆಸ್ಟ್ ಹೇಳಿದ್ದೇನೆ. ರಾಜ್ಯದಲ್ಲಿ ಬಾಲಕರು ಹಾಗೂ ಬಾಲಕಿಯರು ಸಮಪಾಲಿನಲ್ಲಿ ಪರೀಕ್ಷೆ ಬರೆಯುತ್ತಿದ್ದು, ಅಧಿಕಾರಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಿಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾತಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಲಾಖೆ ಉತ್ತಮ ಕಾರ್ಯ ನಡೆಸುತ್ತಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಗೈರು ಹಾಜರಾತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ವೇಳೆ ಹಾಜರಾತಿ ಹೆಚ್ಚಿಸಲು ಸೂಕ್ತ ಕ್ರಮ ತಗೆದುಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಕನ್ನಡ ಶಾಲೆ ಮುಚ್ಚಲಾಗುತ್ತಿದೆ, ಇಂಗ್ಲೀಷ್ ಶಾಲೆ ಬೇಕು ಎಂಬ ಎರಡು ವಾದಗಳಿವೆ. ಆದರೆ ಯಾವುದಾದರೂ ಭಾಷೆಯಲ್ಲಿ ಆಗಲಿ ಚೆನ್ನಾಗಿ ಪಾಠ ಮಾಡಿದ್ದರೆ ವಿದ್ಯಾರ್ಥಿಗಳು ಯಶಸ್ಸು ಕಂಡಿರುತ್ತಾರೆ. ಶಿಕ್ಷಕರನ್ನು ಯಾವುದೇ ಕಾರ್ಖಾನೆಯಲ್ಲಿ ತಯಾರು ಮಾಡಲು ಸಾಧ್ಯವಿಲ್ಲ. ನಮ್ಮ ಬಳಿ ಇರುವ ಇಂಗೀಷ್ ಶಿಕ್ಷಕರಿಗೆ ಅನುಗುಣವಾಗಿ ಶಾಲೆಗಳನ್ನು ನೀಡಬಹುದೇ ಹೊರತು ಬೇರೆ ಏನು ಮಾಡಲು ಸಾಧ್ಯವಿಲ್ಲ. ಶಿಕ್ಷಣ ಇಲಾಖೆಯಲ್ಲಿ ರಾಜಕೀಯ ಪ್ರವೇಶ ಮಾಡದಿದ್ರೆ ಶಿಕ್ಷಣ ಇಲಾಖೆ ಉತ್ತಮವಾಗಿರುತ್ತದೆ. ರಾಜಕೀಯ ಕಾರಣದಿಂದಲೇ ಇವತ್ತು ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಎಚ್.ಅಕ್ಷಯ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಶುಭಕೋರಿದ ಶಿಕ್ಷಣ ಸಚಿವ: ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಗರದ ಜ್ಯೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶುಕ್ರವಾರ ಭೇಟಿ ನೀಡಿದರು. ಈ ವೇಳೆ ಕೆಲಕಾಲ ವಿದ್ಯಾರ್ಥಿಗಳ ಜೊತೆ ಮಾತನಾಡಿ, ಯಾವುದೇ ಹೆದರಿಕೆ ಇಲ್ಲದೇ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದರು. ಬಳಿಕ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ವೀಕ್ಷಣೆ ಮಾಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ರಾಜ್ಯದಲ್ಲಿ ಬಾಲಕಿಯರು,ಬಾಲಕರು ಸಮ ಪ್ರಮಾಣದಲ್ಲಿ ಪರೀಕ್ಷೆ ಎದುರಿಸುತ್ತಿದ್ದು, ಬೆಂಗಳೂರಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕೊಡಗಿನಲ್ಲಿ ಕಡಿಮೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.






.jpg)
.jpg)

