ಮಕ್ಕಾ ಗ್ರ್ಯಾಂಡ್ ಮಸೀದಿ ರೋಗ ಹರಡುವಿಕೆಯಿಂದ ಮುಕ್ತ: ಸೌದಿ ಅರೆಬಿಯಾ

Photo: PTI
ರಿಯಾದ್, ಎ.22: ಮಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ತರುವ ಯಾವುದೇ ಸಾಂಕ್ರಾಮಿಕ ರೋಗಗಳು, ಕಾಯಿಲೆ ಅಥವಾ ಪರಿಸ್ಥಿತಿ ಇಲ್ಲ. ರಮಝಾನ್ ಸಂದರ್ಭದಲ್ಲಿ ಗ್ರ್ಯಾಂಡ್ ಮಸೀದಿ ರೋಗ ಹರಡುವಿಕೆಯಿಂದ ಮುಕ್ತವಾಗಿದೆ ಎಂದು ಸೌದಿ ಅರೆಬಿಯಾದ ಆರೋಗ್ಯ ಇಲಾಖೆ ಗುರುವಾರ ಹೇಳಿಕೆ ನೀಡಿದೆ.
ಮಕ್ಕಾದ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಯಾತ್ರಾರ್ಥಿಗಳಿಗೆ ಅಗತ್ಯವಿದ್ದ ವೈದ್ಯಕೀಯ ಮತ್ತು ಆಂಬ್ಯುಲೆನ್ಸ್ ನೆರವು ಒದಗಿಸುತ್ತಿವೆ ಎಂದು ಸೌದಿ ಅರೆಬಿಯಾದ ಆರೋಗ್ಯ ಇಲಾಖೆಯ ಸಚಿವ ಫಹಾದ್-ಅಲ್-ಜಲಜಿಲ್ ಹೇಳಿದ್ದಾರೆ. 2022ರ ರಮಝಾನ್ನ ಉಮ್ರಾ ಯಾತ್ರೆಯ ಅವಧಿಗೆ ಸಂಬಂಧಿಸಿದ ಸಾಂಕ್ರಾಮಿಕ ರೋಗ ತಡೆಗಟ್ಟುವ ಯೋಜನೆಯಲ್ಲಿ ತಡೆಗಟ್ಟುವ ಕ್ರಮಗಳು, ಸಾಂಕ್ರಾಮಿಕ ರೋಗಶಾಸ್ತ್ರೀಯ ಪರೀಕ್ಷಾ ವಿಧಾನಗಳು ಮತ್ತು ಸಾಂಕ್ರಾಮಿಕ ರೋಗಗಳಿಗೆ ಪ್ರತಿಕ್ರಿಯೆ ವಿಧಾನಗಳಿವೆ. ಈ ವರ್ಷದ ರಮಝಾನ್ನ ಆರಂಭಿಕ 20 ದಿನದಲ್ಲಿ 7,200ಕ್ಕೂ ಅಧಿಕ ಯಾತ್ರಿಗಳು ಮಕ್ಕಾದಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಮತ್ತು 36 ತುರ್ತು ಶಸ್ತ್ರಚಿಕಿತ್ಸೆ, 291 ಡಯಾಲಿಸಿಸ್ ಮಾಡಲಾಗಿದೆ. ಯಾತ್ರಿಗಳಿಗೆ ಮತ್ತು ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡುವವರಿಗೆ ಸೇವೆ ಸಲ್ಲಿಸಲು 18,000 ಸಿಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.





