ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ಹಠಾತ್ ರಾಜೀನಾಮೆ

ಹೊಸದಿಲ್ಲಿ: ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಕುಮಾರ್ ಹಠಾತ್ ರಾಜೀನಾಮೆ ನೀಡಿದ್ದು, ಸರಕಾರವು ಶುಕ್ರವಾರ ಸುಮನ್ ಕೆ. ಬೆರಿ ಅವರನ್ನು ನೀತಿ ಆಯೋಗದ ನೂತನ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಬೆರಿ ಅವರು ಮೇ 1, 2022 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಆದೇಶ ತಿಳಿಸಿದೆ. ರಾಜೀವ್ ಕುಮಾರ್ ಅವರ ಅಧಿಕಾರಾವಧಿ ಎಪ್ರಿಲ್ 30ಕ್ಕೆ ಕೊನೆಗೊಳ್ಳಲಿದೆ.
ಖ್ಯಾತ ಅರ್ಥಶಾಸ್ತ್ರಜ್ಞರಾದ ಕುಮಾರ್ ಅವರು ಆಗಸ್ಟ್ 2017 ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಆದೇಶದ ಪ್ರಕಾರ ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಎಪ್ರಿಲ್ 30 ರಿಂದ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗುತ್ತದೆ.
ಕೃಷಿ, ಆಸ್ತಿ ಹಣಗಳಿಕೆ, ಹೂಡಿಕೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ ಹಾಗೂ ಎಲೆಕ್ಟ್ರಿಕ್ ವಾಹನಗಳ ಮೇಲೆ ಕೇಂದ್ರೀಕರಿಸಿ ನೀತಿ ಆಯೋಗದ ನೀತಿ ರಚನೆಯಲ್ಲಿ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕುಮಾರ್ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಡಿಫಿಲ್ ಮತ್ತು ಲಕ್ನೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. ಅವರು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ನಲ್ಲಿ ಹಿರಿಯ ಸಹೋದ್ಯೋಗಿಯಾಗಿದ್ದರು.
ಬೆರಿ ಅವರು ಈ ಹಿಂದೆ ಹೊಸದಿಲ್ಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ನ ಡೈರೆಕ್ಟರ್-ಜನರಲ್ (ಮುಖ್ಯ ಕಾರ್ಯನಿರ್ವಾಹಕ) ಆಗಿ ಸೇವೆ ಸಲ್ಲಿಸಿದ್ದರು.
ಅವರು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ, ಅಂಕಿಅಂಶ ಆಯೋಗ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಆಗಿದ್ದರು.