ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಮುಂದೆ ನಡೆಯಲಿರುವ 402 ಪಿಎಸ್ಐ ಹುದ್ದೆಗಳ ನೇಮಕಾತಿಗೂ ಅಕ್ರಮ ನಡೆದಿದೆ: ಆರೋಪ ► ''ನೇಮಕಾತಿ ವಿಭಾಗದ ಎಡಿಜಿಪಿ ವರ್ಗಾವಣೆ ಮಾಡಲಿ''

ಪ್ರಿಯಾಂಕ್ ಖರ್ಗೆ
ಕಲಬುರಗಿ: ಪಿಎಸ್ ಐ ಅಕ್ರಮ ನೇಮಕಾತಿ ಹಗರಣದಲ್ಲಿ ದೊಡ್ಡ ದೊಡ್ಡ ಕುಳಗಳ ಕೈವಾಡ ಇರುವ ಶಂಕೆ ಇದ್ದು, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಯಲು ಗೃಹ ಸಚಿವರು ರಾಜೀನಾಮೆ ನೀಡಲಿ ಹಾಗೂ ತನಿಖೆ ಮುಗಿಯುವವರೆಗೆ ನೇಮಕಾತಿ ಎಡಿಜಿಪಿ ಅವರನ್ನು ವರ್ಗಾವಣೆ ಮಾಡುವಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಕಲಬುರಗಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನೇಮಕಾತಿಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆಯ ಆಡಿಯೋ ಟೇಪ್ ಬಿಡುಗಡೆ ಮಾಡಿದ ಅವರು, ‘ಮುಂದೆ ನಡೆಯಲಿರುವ 402 ಪಿಎಸ್ಐ ಹುದ್ದೆಗಳ ನೇಮಕಾತಿಗೂ ಡೀಲ್ ನಡೆದಿದೆ. ಫೋನ್ ನಲ್ಲಿ ಮಾತನಾಡಿರುವ ವ್ಯಕ್ತಿ ಪಿಎಸ್ ಐ ಸಾಹೇಬ್ರೆ ಎಂದುನ ಕರೆಯುತ್ತಿರುವು ಕೇಳಿಸುತ್ತಿದೆ. ಆಡಿಯೋದರಲ್ಲಿರುವ ವ್ಯಕ್ತಿ ಈಗಾಗಲೇ ಪಿಎಸ್ ಐ ಸಮವಸ್ತ್ರದಲ್ಲಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿ ಕಡೆಯವರು ಈ ಮಾತುಕತೆ ನಡೆಸಿರುವ ಸಾಧ್ಯತೆ ಇದೆ. ಈ ಆಡಿಯೊ ನ್ಯಾಯಾಲಯದಲ್ಲಿ ಪುರಾವೆ ಆಗುವುದಿಲ್ಲವಾದರೂ ಇದರ ಅಧಾರದ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯಬೇಕು’ ಎಂದು ಪ್ರಿಯಾಂಕ್ ಒತ್ತಾಯಿಸಿದರು.
‘ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮುಖ್ಯಸ್ಥೆ ಆಗಿರುವ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆ ಎಸ್ಐ ನೇಮಕ ಪರೀಕ್ಷೆಗೆ ಯೋಗ್ಯವಲ್ಲ ಎಂದು ಈ ಹಿಂದೆ ಡಿಡಿಪಿಐ ತಿರಸ್ಕರಿಸಿದ್ದರು. ಅದನ್ನು ಮೀರಿ ಆ ಸಂಸ್ಥೆ ಪರೀಕ್ಷಾ ಕೇಂದ್ರವಾಗಲು ಯಾರು ಶಿಫಾರಸು ಪತ್ರ ನೀಡಿದ್ದರು ಎಂಬುದು ಬಯಲಾಗಬೇಕು’ ಎಂದರು.
545 ಪಿಎಸ್ ಐ ಹುದ್ದೆಗಳಿಗೆ ಒಟ್ಟು 1,28,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ 75,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಎಲ್ಲ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದ ಶಾಸಕರು ಇಡೀ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ರಾಜೇಶ್ ಹಾಗರಗಿ ಹಾಗೂ ಇತರ 13 ಜನರನ್ನ ಆರೆಸ್ಟ್ ಮಾಡಲಾಗಿದೆ. ಆದರೆ ಬಿಜೆಪಿ ಪಕ್ಷದ ನಾಯಕಿ ದಿವ್ಯಾ ಹಾಗರಗಿ ಅವರನ್ನ ಅರೆಸ್ಟ್ ಮಾಡದಿರುವುದು ಗಮನಿಸಿದರೆ ಪ್ರಮುಖ ಕಿಂಗ್ ಪಿನ್ ಗಳು ಇನ್ನೂ ಹೊರಗಡೆ ಇದ್ದಾರೆ ಎಂದು ತಿಳಿಯುತ್ತಿದೆ ಎಂದರು.
ದಿವ್ಯಾ ಹಾಗರಗಿ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದ ಮೇಲೆ ಅವರು ಯಾರ ಜೊತೆಯಲ್ಲಾದರೂ ಸಂಪರ್ಕದಲ್ಲಿದ್ದಾರೆ ಎಂದರ್ಥವಲ್ಲವೇ? ಇದು ಅಧಿಕಾರಿಗಳಿಗೆ ಹಾಗೂ ಗುಪ್ತಚರ ಇಲಾಖೆಗೆ ತಿಳಿದಿಲ್ಲವೇ? ಇದೆಲ್ಲ ಗಮನಿಸಿದರೆ ತನಿಖಾಧಿಕಾರಿಗಳ ಮೇಲೆ ಒತ್ತಡ ಬರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಇಡೀ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಕೆಲವು ಪ್ರತಿಭಾವಂತರು ಪರೀಕ್ಷೆ ಬರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಮರು ಪರೀಕ್ಷೆ ನಡೆಸಬೇಕೇ ಎನ್ನುವುದನ್ನು ಸರ್ಕಾರ ನಿರ್ಧರಿಸಬೇಕು ಎಂದು ಹೇಳಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಜಲ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ ಅವರನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿ ಅವರು, ಮಹಾಂತೇಶ ಪಾಟೀಲ ಅವರು ಕಾಂಗ್ರೆಸ್ ರಾಜೀನಾಮೆ ಕೊಟ್ಟಿದ್ದಾರೆ. ಆದರೂ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ದ ಕೂಡಾ ಕಾನೂನು ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.







