ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಗೆ ದಂಡ

ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.7 ರ ಅಡಿಯಲ್ಲಿ ಲೆವೆಲ್ 2 ತಪ್ಪನ್ನು ಪಂತ್ ಒಪ್ಪಿಕೊಂಡರು ಹಾಗೂ ದಂಡವನ್ನು ಸ್ವೀಕರಿಸಿದರು. ಪಂತ್ ಅವರ ಸಹ ಆಟಗಾರ ಹಾಗೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡವನ್ನು ವಿಧಿಸಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರ ಪಂದ್ಯ ಶುಲ್ಕದ 100 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ಈ ತಪ್ಪಿಗಾಗಿ ಅವರು ಒಂದು ಪಂದ್ಯದ ನಿಷೇಧವನ್ನೂ ಎದುರಿಸುತ್ತಿದ್ದಾರೆ.
ಆಮ್ರೆ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 2 ತಪ್ಪನ್ನು ಒಪ್ಪಿಕೊಂಡರು ಹಾಗೂ ಶಿಕ್ಷೆಯನ್ನು ಸ್ವೀಕರಿಸಿದರು.
ಶುಕ್ರವಾರ ನಡೆದ ಐಪಿಎಲ್ ಪಂದ್ಯದ ಅಂತಿಮ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 36 ರನ್‌ಗಳ ಅಗತ್ಯವಿತ್ತು. ಆ ಓವರ್‌ನ ಮೂರನೇ ಎಸೆತದಲ್ಲಿ ರಾಜಸ್ಥಾನದ ವೇಗಿ ಓಬೆಡ್ ಮೆಕಾಯ್ ಫುಲ್-ಟಾಸ್ ಬೌಲಿಂಗ್ ಮಾಡಿದರು ಹಾಗೂ ರೋವ್‌ಮನ್ ಪೊವೆಲ್ ಅದನ್ನು ಸಿಕ್ಸರ್‌ಗೆ ಅಟ್ಟಿದರು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫುಲ್ ಟಾಸ್ ಅನ್ನು ನೋ ಬಾಲ್ ಎಂದು ಭಾವಿಸಿ ಡಗೌಟ್‌ನಿಂದ ಸನ್ನೆ ಮಾಡಲಾರಂಭಿಸಿದರು.
ಇದಾದ ಕೂಡಲೇ ಪಂತ್ ಇಬ್ಬರು ಬ್ಯಾಟರ್‌ಗಳಾದ ಪೊವೆಲ್ ಹಾಗೂ ಕುಲದೀಪ್ ಯಾದವ್ ಅವರನ್ನು ಮೈದಾನದಿಂದ ಹೊರಗೆ ಬರುವಂತೆ ಸನ್ನೆ ಮಾಡುತ್ತಿರುವುದು ಕಂಡುಬಂದಿತು. ನಂತರ ಕೋಚ್ ಆಮ್ರೆ ಮೈದಾನದ ಅಂಪೈರ್ ನಿತಿನ್ ಮೆನನ್ ಅವರೊಂದಿಗೆ ಮಾತನಾಡಲು ಮೈದಾನದೊಳಕ್ಕೆ ಕಾಲಿಟ್ಟರು.
ಆಮ್ರೆ ಅವರು ಮೆನನ್ ಅವರೊಂದಿಗೆ ಮಾತನಾಡುತ್ತಿದ್ದಾಗ ರಾಜಸ್ಥಾನ ರಾಯಲ್ಸ್ ಬ್ಯಾಟರ್ ಜೋಸ್ ಬಟ್ಲರ್ ಪಂತ್ ಅವರೊಂದಿಗೆ ವಾಗ್ವಾದ ನಡೆಸಿದರು. ಅಂತಿಮ ಓವರ್ ಪಂದ್ಯವು ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.