ಉತ್ತರ ಪ್ರದೇಶ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐದು ಮಂದಿ ತಮ್ಮ ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಯಾಗರಾಜದ ಖ್ವಾಜಾಪುರ್ ನಿವಾಸಿಗಳಾದ ರಾಮ್ ಕುಮಾರ್ ಯಾದವ್ (55), ಕುಸುಮ್ ದೇವಿ (52), ಪುತ್ರಿ ಮನೀಶಾ (25), ಸೊಸೆ ಸವಿತಾ(27) ಹಾಗೂ ಮೀನಾಕ್ಷಿ (2) ಮೃತಪಟ್ಟವರು.
ಕುಟುಂಬದ ಇನ್ನೊಬ್ಬಳು ಹೆಣ್ಣು ಮಗಳು 5 ವರ್ಷದ ಸಾಕ್ಷಿ ಬಚಾವಾಗಿದ್ದಾಳೆ. ಘಟನೆ ನಡೆದಾಗ ಯಾದವ್ ಅವರ ಪುತ್ರ ಸುನೀಲ್ (30) ಮನೆಯಲ್ಲಿರಲಿಲ್ಲ.
ಮೃತದೇಹಗಳ ಮೇಲಿನ ಗಾಯಗಳನ್ನು ಗಮನಿಸಿದರೆ ಹಂತಕರು ಎಲ್ಲರ ತಲೆಗೆ ಹೊಡೆದು ಸಾಯಿಸಿದ್ದಾರೆ. ಹಂತಕರನ್ನು ಪತ್ತೆ ಹಚ್ಚಲು ಏಳು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೂ ಸ್ಥಳಕ್ಕೆ ಧಾವಿಸಿದ್ದಾರೆ.
ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ ನಂತರ ಪೊಲೀಸರು ಅಲ್ಲಿಗೆ ಧಾವಿಸಿದ್ದರು. ಬೆಂಕಿ ಕಾಣಿಸಿಕೊಂಡ ಕೊಠಡಿಯ ಪಕ್ಕದಲ್ಲಿ ಮಗು ಮತ್ತಾಕೆಯ ತಾಯಿಯ ಮೃತದೇಹಗಳಿದ್ದರೆ ಮಂಚದ ಮೇಲಿದ್ದ ಯಾದವ್ ಮತ್ತವರ ಪತ್ನಿ ಪತ್ತೆಯಾದಾಗ ಉಸಿರಾಡುತ್ತಿದ್ದರೂ ನಂತರ ಮೃತಪಟ್ಟಿದ್ದಾರೆ.
ಕುಟುಂಬಕ್ಕೆ ವೈರಿಗಳಿದ್ದಾರೆಯೇ ಅಥವಾ ದ್ವೇಷದಿಂದ ಕೊಲೆ ನಡೆದಿದೆಯೇ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಒಂದು ವಾರದ ಹಿಂದೆಯಷ್ಟೇ ಜಿಲ್ಲೆಯ ಖಗಲ್ಪುರ್ ಎಂಬಲ್ಲಿ ನಡೆದ ಇಂತಹುದೇ ಘಟನೆಯಲ್ಲಿ 38 ವರ್ಷದ ಮಹಿಳೆ ಮತ್ತಾಕೆಯ ಮೂವರು ಪುತ್ರಿಯರು ಕತ್ತು ಸೀಳಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಹಿಳೆಯ ಪತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು.







