ಬೆಳ್ತಂಗಡಿ: ಆದಿವಾಸಿ ಮಹಿಳೆಗೆ ಹಲ್ಲೆ, ಅರೆಬೆತ್ತಲೆಗೊಳಿಸಿ ವೀಡಿಯೊ ಮಾಡಿದ ದುಷ್ಕರ್ಮಿಗಳ ತಂಡ
ಬಿಜೆಪಿ ಮುಖಂಡನ ನೇತೃತ್ವದ ತಂಡದಿಂದ ಕೃತ್ಯ : ಆರೋಪ

ಬೆಳ್ತಂಗಡಿ: ಸರಕಾರಿ ಜಮೀನಿನಲ್ಲಿ ನಿವೇಶನದ ವಿಚಾರವನ್ನು ಮುಂದಿಟ್ಟುಕೊಂಡು ದುಷ್ಕರ್ಮಿಗಳ ತಂಡವೊಂದು ಆದಿವಾಸಿ ಸಮುದಾಯದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕ ರಸ್ತೆಯಲ್ಲಿ ಆಕೆಯ ಉಟ್ಟ ಬಟ್ಟೆಗಳನ್ನು ಹರಿದು ಹಾಕಿ ಅರೆಬೆತ್ತಲೆಗೊಳಿಸಿ ಕೇಕೆ ಹಾಕಿ ಅದನ್ನು ವೀಡಿಯೊ ಚಿತ್ರೀಕರಣವನ್ನೂ ಮಾಡಿದ ಅಮಾನವೀಯ ಘಟನೆ ಉಜಿರೆ ಗ್ರಾಮದ ಅಳಕೆ ಎಂಬಲ್ಲಿ ನಡೆದಿದೆ.
ಅಳಕೆ ನಿವಾಸಿ ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರು ಈ ಕೃತ್ಯವನ್ನು ಎಸಗಿದವರು ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎ.19 ರಂದು ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸಲ್ಲಿಸಿದ್ದ 94ಸಿ ಅರ್ಜಿಯ ಅಳತೆಗೆಂದು ಅಧಿಕಾರಿಗಳು ಬಂದಿದ್ದರು. ಈ ಸಂದರ್ಭ ಜಾಗದ ಬಗ್ಗೆ ಇನ್ನೊಂದು ತಂಡ ತಕರಾರು ತೆಗೆದಿದೆ. ಇದರಿಂದಾಗಿ ಅಳತೆಗೆ ಬಂದವರು ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳು ತೆರಳಿದ ಬಳಿಕ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ಮಹಿಳೆಯರ ಮೇಲೆ ಈ ತಂಡ ಎರಗಿದೆ. ಮಹಿಳೆಯರೂ ಇದ್ದ ತಂಡ ಮೊದಲು ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅಕ್ಕನ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ನೋಡಿ ಅಕ್ಕನ ರಕ್ಷಣೆಗೆ ತೆರಳಿದ ತಂಗಿಯ ಮೇಲೆ ಇವರು ಮುಗಿಬಿದ್ದು ಆಕೆಯ ಬಟ್ಟೆಗಳನ್ನು ಸಂಪೂರ್ಣವಾಗಿ ಹರಿದು ಹಾಕಿದ್ದಾರೆ. ಅಲ್ಲದೆ ಅನಾಗರಿಕರಂತೆ ಕೇಕೆ ಹಾಕಿ ಅರೆಬೆತ್ತಲೆಯಾಗಿದ್ದ ಮಹಿಳೆಯ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಅಲ್ಲಿಂದ ಆಕೆಯನ್ನು ಮನೆಯ ಕಡೆಗೆ ಹೋಗಲೂ ಬಿಡದೆ ಹಲ್ಲೆ ಮಾಡಿದ್ದಾರೆ.
ಇದನ್ನು ನೋಡಿ ಬಂದ ಆಕೆಯ ತಾಯಿಯ ಮೇಲೂ ಇವರು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳ ತಂಡ ಅಲ್ಲಿಂದ ತೆರಳಿದ ಬಳಿಕವಷ್ಟೇ ಈ ಮಹಿಳೆಯರಿಗೆ ಮನೆಗೆ ಹೋಗಲು ಸಾಧ್ಯವಾಯಿತು ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ಸುಮಾರು ಮೂವತ್ತಕ್ಕೂ ಅಧಿಕ ಜನರಿದ್ದರು ಆದರೆ ಯಾರೂ ಅದನ್ನು ತಡೆಯಲು ಮುಂದಾಗಿಲ್ಲ. ಉಜಿರೆ ಗುರಿಪಳ್ಳ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹತ್ತಾರು ವಾಹನಗಳಲ್ಲಿ ಹೋದವರೂ ಇದೆಲ್ಲ ನೋಡಿಕೊಂಡು ಹೋಗಿದ್ದಾರೆ ಆದರೆ ಯಾರೂ ನಮ್ಮ ನೆರವಿಗೆ ಬರಲಿಲ್ಲ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ ದೌರ್ಜನ್ಯಕ್ಕೀಡಾದ ಮಹಿಳೆಯರು.
ʼʼಉತ್ತರ ಪ್ರದೇಶವನ್ನೂ ನಾಚಿಸುವ ರೀತಿಯಲ್ಲಿ ಉಜಿರೆಯಲ್ಲಿ ಆದಿವಾಸಿ ಸಮುದಾಯದ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಪ್ರವೃತ್ತಿಯಾಗಿದೆ. ಬಿಜೆಪಿ ಮುಖಂಡನ ನೇತೃತ್ವದ ತಂಡ ಈ ಕೃತ್ಯವನ್ನು ಎಸಗಿದ್ದು, ಆರಂಭದಲ್ಲಿ ಹಲವು ಒತ್ತಡಗಳಿಂದ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಪ್ರಯತ್ನಿಸಿದ್ದರು. ನಾವು ಹೋದ ಬಳಿಕವಷ್ಟೆ ಪ್ರಕರಣ ದಾಖಲಿಸಿದ್ದಾರೆ. ಕೃತ್ಯ ನಡೆಸಿದ ದುಷ್ಕರ್ಮಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ತಕ್ಷಣ ಅವರನ್ನು ಪೊಲೀಸರು ಬಂಧಿಸಬೇಕುʼʼ
- ಈಶ್ವರಿ ಪದ್ಮುಂಜ
ದಲಿತ ಮುಖಂಡೆ