ಎ.25ರಂದು ಉಡುಪಿಯಲ್ಲಿ ಶೂನ್ಯ ನೆರಳಿನ ದಿನ

ಉಡುಪಿ : ಶೂನ್ಯ ನೆರಳಿನ ವಿದ್ಯಮಾನವನ್ನು ಉಡುಪಿಯಲ್ಲಿ ಎ.25ರಂದು ಮಧ್ಯಾಹ್ನ 1.29ಕ್ಕೆ, ಮಂಗಳೂರಿನಲ್ಲಿ ಎ.24ರಂದು ಮಧ್ಯಾಹ್ನ 1.28ಕ್ಕೆ, ಹಾಗೂ ಬೆಂಗಳೂರಿನಲ್ಲಿ ಎ.24ರಂದು ಮಧ್ಯಾಹ್ನ 12.18ಕ್ಕೆ ಶೂನ್ಯ ನೆರಳಿನ ವಿದ್ಯಮಾನವನ್ನು ವೀಕ್ಷಿಸಬಹುದಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.
ಸೂರ್ಯನು ನಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ, ನೆರಳು ನೇರವಾಗಿ ಕೆಳಗಿರುತ್ತದೆ. ನಾವು ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ನಿಮಗೆ ಗೋಚರಿಸುವುದಿಲ್ಲ. ಇದನ್ನು ಶೂನ್ಯ ನೆರಳು ಎಂದು ಕರೆಯಲಾಗುತ್ತದೆ.
ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯನು ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಎರಡು ದಿನಗಳು ಪ್ರತಿವರ್ಷ ಏಪ್ರಿಲ್- ಮೇ ಮತ್ತು ಆಗಸ್ಟ್‌ನಲ್ಲಿ ಸಂಭವಿಸುತ್ತವೆ. ಆಗಸ್ಟ್‌ತಿಂಗಳು ಮಳೆಗಾಲವಾಗಿದ್ದರಿಂದ, ಬೇಸಿಗೆಗಾಲವಾದ ಏಪ್ರಿಲ್ ತಿಂಗಳಿನಲ್ಲಿ ಈ ಶೂನ್ಯ ನೆರಳಿನ ದಿನಗಳನ್ನು ನೋಡುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಉಪಕರಣಗಳನ್ನು ಬಳಸದೆ ಗಮನಿಸಬಹುದಾದ ಸುಲಭವಾದ ಖಗೋಳ ವಿದ್ಯಮಾನಗಳಲ್ಲಿ ಇದು ಒಂದು.
ರಾಜ್ಯದಲ್ಲಿ ಶೂನ್ಯ ನೆರಳಿನ ದಿನಾಂಕಗಳು
ಎ.22: ಮೈಸೂರು, ಮಡಿಕೇರಿ, 23: ಮಂಡ್ಯ, ಪುತ್ತೂರು, ಎ.24: ಮಂಗಳೂರು, ಹಾಸನ, ಬೆಂಗಳೂರು, 25: ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, 26: ಕುಂದಾಪುರ, ತೀರ್ಥಹಳ್ಳಿ, ಗೌರಿಬಿದನೂರ್, 27: ಭಟ್ಕಳ, ಶಿವಮೊಗ್ಗ, ಚನ್ನಗಿರಿ, 28: ಹೊನ್ನವರ, ಕುಮಟ, ಶಿಕಾರಿಪುರ, ಚಿತ್ರದುರ್ಗ, 29: ಗೋಕರ್ಣ, ಶಿರಸಿ, ರಾಣೆಬೆನ್ನೂರು, ದಾವಣಗೆರೆ, 30: ಕಾರವಾರ, ಹಾವೇರಿ, ಮೇ1: ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, 2: ಧಾರವಾಡ, ಗದಗ, 3: ಬೆಳಗಾವಿ, ಸಿಂಧನೂರ್, 4: ಗೋಕಾಕ್, ಬಾಗಲಕೋಟೆ, ರಾಯಚೂರು, 6: ಯಾದಗಿರಿ, 7: ವಿಜಯಪುರ, 9: ಕಲ್ಬುರ್ಗಿ, 10: ಹುಮ್ನಾಬಾದ್, ಮೇ 11: ಬೀದರ್‌ನಲ್ಲಿ ಶೂನ್ಯ ನೆರಳಿನ ದಿನಗಳು ಬರಲಿವೆ. ಈ ಸ್ಥಳದ ನೆರಳುಗಳು ಪೂರ್ವಕ್ಕೆ ಮಧ್ಯಾಹ್ನ 12.15ರಿಂದ ಮತ್ತು ರಾಜ್ಯದ ಪಶ್ಚಿಮ ಭಾಗಗಳಿಗೆ ಮಧ್ಯಾಹ್ನ 12.25ರ ನಡುವೆ ಒಂದು ನಿಮಿಷ ಕಣ್ಮರೆಯಾಗುತ್ತದೆ.