ಎ.27-30: ರಾಷ್ಟ್ರೀಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ
ಮಂಗಳೂರು : ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಸಹಯೋಗದೊಂದಿಗೆ ಶ್ರೀ ಬಾಲಾಂಜನೇಯ ಜಿಮ್ನಾಶಿಯಂ ತನ್ನ ೭೫ನೇ ವರ್ಷಾಚರಣೆಯ ಅಂಗವಾಗಿ ೪೭ನೇ ಪುರುಷರ ಹಾಗೂ ೩೯ನೇ ಮಹಿಳೆಯರ ರಾಷ್ಟ್ರೀಯ ಸೀನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-೨೦೨೨ ಸ್ಪರ್ಧೆಗಳನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಎ.೨೭ರಿಂದ ೩೦ರವರೆಗೆ ಆಯೋಜಿಸಿದೆ ಎಂದು ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಅಧ್ಯಕ್ಷ ತೇಜೋಮಯ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ವಿವಿಧ ಭಾಗಗಳಿಂದ ವಿಶ್ವ ಹಾಗೂ ಏಷ್ಯನ್ ದಾಖಲೆ ಮಾಡಿದ 500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ೧೨೦ ತೀರ್ಪುಗಾರರು ಸಹಕರಿಸಲಿದ್ದಾರೆ.
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಮಾತನಾಡಿ ಎ.೨೭ರಂದು ಸಂಜೆ ೪ಕ್ಕೆ ಕ್ರೀಡಾಳುಗಳು ನಗರದ ಆಯ್ದ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಸಾಗಿ ಬಳಿಕ ನಗರದ ಬಾಲಾಂಜನೇಯ ಜಿಮ್ನಾಶಿಯಂಗೆ ಭೇಟಿ ನೀಡುವರು. ಅಲ್ಲಿಂದ ಪುರಭವನಕ್ಕೆ ಆಗಮಿಸುವರು. ೫:೩೦ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.
ಕರ್ನಾಟಕದ ಪುರುಷರ ಮತ್ತು ಮಹಿಳೆಯರ ಅತ್ಯುತ್ತಮ ತಂಡವೂ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಈ ಸ್ಪರ್ಧಾ ಕೂಟದಲ್ಲಿ ಆಯ್ಕೆಯಾಗುವ ಸೀನಿಯರ್ ಪವರ್ ಲಿಫ್ಟರ್‌ಗಳು ಮುಂದೆ ಕೊಯಮುತ್ತೂರಿನಲ್ಲಿ ನಡೆಯಲಿರುವ ಏಶ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ. ಎ.೩೦ರಂದು ಸಂಜೆ ೫:೩೦ಕ್ಕೆ ಬಹುಮಾನ ಮಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಾಲಾಂಜನೇಯ ಜಿಮ್ನಾಶಿಯಂನ ಅಧ್ಯಕ್ಷ ಉಮೇಶ್ ಗಟ್ಟಿ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಖಜಾಂಚಿ ಜಯರಾಂ ಎಂ., ಮಾಜಿ ಮೇಯರ್ ಪುರಂದರ ದಾಸ್ ಕೂಳೂರು ಉಪಸ್ಥಿತರಿದ್ದರು.







