‘ಬಮೂಲ್' ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ: ತನಿಖೆಗೆ ಸರಕಾರದ ಆದೇಶ

ಬೆಂಗಳೂರು, ಎ. 23: ‘ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಬಮೂಲ್)ದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ರಾಜ್ಯ ಸರಕಾರ ತನಿಖೆಗೆ ಆದೇಶಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, 2022ರ ಜನವರಿ 21ರಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಪತ್ರ ಬರೆದಿದ್ದರು. ‘ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ(ಬಮೂಲ್)ದ 297 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. 27,259 ಮಂದಿ ಅರ್ಜಿ ಸಲ್ಲಿಸಿದ್ದರು. 2021ರ ಡಿ.12ರಂದು ಲಿಖಿತ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಹಲವು ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ' ಎಂದು ಗಮನ ಸೆಳೆದಿದ್ದರು.
‘ಅನರ್ಹ ಹಾಗೂ ಬಲಿಷ್ಠ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. 15-25 ಲಕ್ಷ ರೂ.ಗಳ ವರೆಗೂ ಹಣ ಪಡೆಯಲಾಗಿದೆ. ಓಎಂಆರ್ ಶೀಟ್‍ನಲ್ಲಿ ವ್ಯತ್ಯಾಸವಿದೆ. ಈ ಬಗ್ಗೆ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದರು. ಸಂಸದರ ಪತ್ರ ಆಧರಿಸಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಜ.27ರಂದು ಪತ್ರ ಬರೆದು ಸಹಕಾರ ಇಲಾಖೆಯ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ ಅವರಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಅದರಂತೆ ತನಿಖೆಗೆ ಆದೇಶಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿವಿಧ ಹುದ್ದೆಗಳ ನೇಮಕಾತಿಗೆ ಬರೆದಿರುವ ಲಿಖಿತ ಪರೀಕ್ಷೆಯಲ್ಲೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಮತ್ತೊಂದು ನೇಮಕಾತಿ ಹಗರಣ ಸದ್ದು ಮಾಡುತ್ತಿದೆ. ಈಗಾಗಲೇ ಕೆಪಿಎಸ್ಸಿ ನೇಮಕಾತಿ, ಪಿಎಸ್ಸೈ ನೇಮಕದಲ್ಲೂ ಅಕ್ರಮ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಮೂಲ್ ನೇಮಕಾತಿಯಲ್ಲೂ ಅವ್ಯವಹಾರ ನಡೆದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.







