ರಾಜ್ಯದ ಜನರಿಗೆ ಕಮಿಷನ್ ಸರಕಾರಗಳ ಅಗತ್ಯವಿಲ್ಲ: ಎಎಪಿ

ಬೆಂಗಳೂರು, ಎ.23: “ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತವನ್ನು ಆಪ್ ಸರಕಾರ ಮಾತ್ರ ನೀಡಲಿದ್ದು, ಜೆಸಿಬಿ ಪಕ್ಷಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಧೈರ್ಯ ಮತ್ತು ನೈತಿಕ ಅಧಿಕಾರ ಇಟ್ಟುಕೊಂಡಿದೆ. ಜನರಿಗೆ ಶೇ.40 ಅಥವಾ ಶೇ.20ರಷ್ಟು ಕಮಿಷನ್ ಸರಕಾರ ಬೇಕಿಲ್ಲ. ರಾಜ್ಯದ ಜನರಿಗೆ ಕೇವಲ ಶೂನ್ಯ ಭ್ರಷ್ಟಾಚಾರದ ಸರಕಾರ ಬೇಕಿದೆ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ತಿಳಿಸಿದರು.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, “ಆಮ್ ಆದ್ಮಿ ಪಕ್ಷವು ರಾಜ್ಯದ ಮತ್ತು ದೇಶದ ಜನರಿಗೆ ಹೊಸ ಆಶಾಕಿರಣವಾಗಿ ಹೊರಹೊಮ್ಮುತ್ತಿದೆ. ಕಾಂಗ್ರೆಸ್ ಅತ್ಯಂತ ಹಳೆಯ ಪಕ್ಷವಾಗಿದ್ದು, ಇದರ ಉಪಯುಕ್ತತೆ ಅವಧಿ ಮೀರಿದೆ. ಜನರಿಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಹೋಗಿದೆ” ಎಂದರು.
“ಜೆಡಿಎಸ್‍ಗೆ ಸಮಯ ಮತ್ತು ಅವಕಾಶ ನೀಡಿದಾಗಲೂ ಭ್ರಷ್ಟಾಚಾರದ ಬಗ್ಗೆ ಏನೂ ಮಾಡಲು ಆಗಲಿಲ್ಲ ಎಂಬುದನ್ನು ಜೆಡಿಎಸ್ ಒಪ್ಪಿಕೊಂಡಿದೆ. ಆದ್ದರಿಂದ ಅವರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅರವಿಂದ ಅವರಿಗೆ ಏನು ಮಾಡಲು ಸಾಧ್ಯ ಎಂಬುದನ್ನು ತೋರಿಸಲು ಅವಕಾಶ ನೀಡಬೇಕು” ಎಂದು ಅವರು ಹೇಳಿದರು.
“ಅರವಿಂದರ ಆಪ್ ಪಕ್ಷ ತಾನು ಚುನಾವಣೆಯಲ್ಲಿ ಹೇಳಿದ್ದನ್ನು ದೆಹಲಿಯಲ್ಲಿ ಮಾಡಿ ತೋರಿಸಿದೆ. ಈಗ ಪಂಜಾಬಿನಲ್ಲೂ ಮಾಡುತ್ತಿದೆ. ಜಿರೋ ಪರ್ಸೆಂಟ್ ಎಂಬುದು ಕೇವಲ ಕನಸಲ್ಲ ನನಸು ಎಂಬುದನ್ನು ಜನತೆಗೆ ತೋರಿಸಿಕೊಟ್ಟಿದೆ ಎಂದ ಅವರು, ನಮಗೆ ಯಾರು ಯಾರ ಬಿ ಟೀಮ್ ಎಂಬ ಚರ್ಚೆ ನಿರರ್ಥಕವಾಗಿದ್ದು, ಆಪ್ ಕರ್ನಾಟಕದ ಎ ಟೀಮ್ ಎನ್ನುವುದು ಮುಖ್ಯವಾಗಿದೆ” ಎಂದರು.
“ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಕೆಲವು ಒಳ್ಳೆಯ ಜನಪ್ರತಿನಿಧಿಗಳು ಇದ್ದಾರೆ. ಅರವಿಂದ ಅವರು ಹೇಳಿದಂತೆ ಒಳ್ಳೆಯ ಮತ್ತು ಸಮಾನ ಮನಸ್ಕರು ಮುಂದೆ ಬಂದು ಆಪ್ ಪಕ್ಷ ಸೇರಿದರೆ, ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸಾಧ್ಯವಾಗುತ್ತದೆ. ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬಹುದು” ಎಂದು ಅವರು ಹೇಳಿದರು.
ಇದುವರೆಗೆ ಆಪ್‍ನ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಬಿಜೆಪಿ, ಕೇಜ್ರಿವಾಲ್ ನಗರಕ್ಕೆ ಭೇಟಿ ನೀಡುತ್ತಿರುವ ವಿಚಾರ ಕಿವಿಗೆ ಬೀಳುತ್ತಲೇ, ಉಚಿತ ವಿದ್ಯುತ್ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ ಮತ್ತು ಎಸ್.ಸಿ. ಹಾಗೂ ಎಸ್.ಟಿ. ವರ್ಗದವರಿಗೆ 75 ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದೆ. ಬಿಜೆಪಿಯ ಜನಪ್ರತಿನಿಧಿಗಳು ಶೇ.40 ಕಮಿಷನ್ ಪಡೆಯುವುದನ್ನು ನಿಲ್ಲಿಸಿದರೆ, ನಾಡಿನ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಬಹುದು.
-ಪೃಥ್ವಿ ರೆಡ್ಡಿ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ







