ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ "ಪೊಲೀಸ್ ಠಾಣೆ ಚಲೋ" ಎಚ್ಚರಿಕೆ
ಮಹಿಳೆಗೆ ಹಲ್ಲೆ, ಅರೆಬೆತ್ತಲೆ ಪ್ರಕರಣದ ದುಷ್ಕರ್ಮಿಗಳ ಬಂಧನಕ್ಕೆ ಗಡುವು

ಫೈಲ್ ಫೋಟೊ
ಮಂಗಳೂರು : ಸರಕಾರಿ ಜಮೀನಿನ ನಿವೇಶನಕ್ಕೆ ಸಂಬಂಧಿಸಿದಂತೆ ಆದಿವಾಸಿ ಮಹಿಳೆಯ ಮೇಲೆ ದಾಳಿ ನಡೆಸಿ ಅರೆಬೆತ್ತಲೆಗೊಳಿಸಿದ ಕೃತ್ಯ ಅತ್ಯಂತ ಅಮಾನವೀಯವಾದುದು. ಇದರ ನೇತೃತ್ವವನ್ನು ಬಿಜೆಪಿ ಎಸ್ಟಿ ಮೋರ್ಛಾದ ಅಧ್ಯಕ್ಷ ವಹಿಸುವ ಮೂಲಕ ಮಹಿಳೆಯರನ್ನು ಮಾತೆ, ದೇವತೆ ಎನ್ನುವವರ ನಿಜ ಬಣ್ಣ ಬಯಲಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಉಜಿರೆ ಗ್ರಾಮದಲ್ಲಿ ನಡೆದ ಈ ಅಮಾನವೀಯ ಕೃತ್ಯ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಹಿಳೆಯರನ್ನು ಮಾತೆ, ದೇವತೆ ಎನ್ನುವ ಬಿಜೆಪಿ ಪಕ್ಷದ ಎಸ್ಟಿ ಮೋರ್ಛಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಎಂಬಾತನ ನೇತೃತ್ವದಲ್ಲಿ ಮಹಿಳೆಯನ್ನು ನಡು ರಸ್ತೆಯಲ್ಲಿ ಅರೆಬೆತ್ತಲೆಗೊಳಿಸಿರುವುದು ರಾಮರಾಜ್ಯದ ಪರಿಕಲ್ಪನೆಯೇ? ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಶಾಸಕ ಹರೀಶ್ ಪೂಂಜಾರ ಮೌನ ಮಹಿಳೆಯನ್ನು ನಡು ಬೀದಿಯಲ್ಲಿ ಅರೆಬೆತ್ತಲೆಗೊಳಿಸಿರುವುದಕ್ಕೆ ಸಮ್ಮತಿಯೇ? ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳ ಹೋರಾಟ ಏಕಿಲ್ಲ ? ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶ, ಗುಜರಾತ್ ಮಾದರಿಯಂತಿದೆ. ಇಂತಹ ಘಟನೆಯು ಶಾಸಕರ ಚುನಾವಣಾ ರಾಜಕೀಯದ ಹಿಡನ್ ಅಜೆಂಡಾ ಅಡಗಿದೆ. ತಪ್ಪಿತಸ್ಥ ದುಷ್ಕರ್ಮಿಗಳನ್ನು 24 ಘಂಟೆಗಳಲ್ಲಿ ಬಂಧಿಸದಿದ್ದರೆ ಪೊಲೀಸ್ ಠಾಣೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಶೇಖರ್ ಲಾಯಿಲ ಎಚ್ಚರಿಕೆ ನೀಡಿದ್ದಾರೆ.