ವರ್ಚುವಲ್ ಆದಾಯಕ್ಕೆ 30% ತೆರಿಗೆ: ದುಬೈಗೆ ಸ್ಥಳಾಂತರಗೊಂಡ ಕ್ರಿಪ್ಟೋ ಕಂಪೆನಿಯ ನಿಶ್ಚಲ್ ಶೆಟ್ಟಿ, ಸಿದ್ಧಾರ್ಥ್ ಮೆನನ್

ನಿಶ್ಚಲ್ ಶೆಟ್ಟಿ (Photo: Twitter/@NischalShetty)
ಹೊಸದಿಲ್ಲಿ: ಭಾರತೀಯ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆ ವಝೀರ್ಎಕ್ಸ್(WazirX) ಸಂಸ್ಥಾಪಕರಾದ ನಿಶ್ಚಲ್ ಶೆಟ್ಟಿ ಮತ್ತು ಸಿದ್ದಾರ್ಥ್ ಮೆನನ್ ಅವರು ತಮ್ಮ ನೆಲೆಯನ್ನು ಭಾರತದಿಂದ ದುಬೈಗೆ ಬದಲಾಯಿಸಿಕೊಂಡಿದ್ದಾರೆ ಎಂದು ವಿವಿಧ ಮೂಲಗಳು ತಿಳಿಸಿರುವುದಾಗಿ Business Today ವರದಿ ಮಾಡಿದೆ.
ನಿಶ್ಚಲ್ ಶೆಟ್ಟಿ ಮತ್ತು ಸಿದ್ದಾರ್ಥ್ ಮೆನನ್ ತಮ್ಮ ಕುಟುಂಬ ಸಮೇತರಾಗಿ ದುಬೈಗೆ ಸ್ಥಳಾಂತರಗೊಂಡಿದ್ದು WazirX ಕಂಪೆನಿಯ ಕಛೇರಿಗಳು ಇನ್ನೂ ಮುಂಬೈ ಹಾಗೂ ಬೆಂಗಳೂರಿನಲ್ಲಿ ಇವೆ ಎಂದು ವರದಿ ಹೇಳಿದೆ. ವಝಿರ್ಎಕ್ಸ್ನ ಸಹ-ಸಂಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಸಮೀರ್ ಮ್ಹಾತ್ರೆ ಅವರು ಭಾರತದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಪ್ರಸ್ತುತ, WazirX ನಲ್ಲಿನ ಸಂಪೂರ್ಣ ಕಾರ್ಯಪಡೆಯು ದೂರದಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತೀಯ ಸರ್ಕಾರವು ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ ಶೇಕಡಾ 30 ರಷ್ಟು ತೆರಿಗೆಯನ್ನು ವಿಧಿಸುವುದರ ಜೊತೆಗೆ ಮೂಲದಲ್ಲಿ ಶೇಕಡಾ 1 ರಷ್ಟು ತೆರಿಗೆಯನ್ನು ಕಡಿತಗೊಳಿಸುವುದರ ಮಧ್ಯೆ ಈ ಬೆಳವಣಿಗೆಯು ನಡೆದಿದೆ. ಸರ್ಕಾರದ ಈ ಕ್ರಮ ಕ್ರಿಪ್ಟೋ ಎಕ್ಸ್ಚೇಂಜ್ಗಳಲ್ಲಿನ ವ್ಯಾಪಾರದ ಪರಿಮಾಣಗಳಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗಿದೆ. ಕ್ರಿಪ್ಟೋ ಕರೆನ್ಸಿ ವ್ಯವಹಾರದ ಮೇಲಿನ ಭಾರತ ಸರ್ಕಾರದ ನೀತಿಯಿಂದಾಗಿ ನಿಶ್ಚಲ್ ಶೆಟ್ಟಿ ಹಾಗೂ ಸಿದ್ದಾರ್ಥ ಮೆನನ್ ದುಬೈಗೆ ಸ್ಥಳಾಂತರಗೊಂಡಿದ್ದಾರೆ ಎಂಬ ವದಂತಿಗಳು ಕೇಳಿಬಂದಿದೆ. ಆದರೆ, ಇದುವರೆಗೆ ತಮ್ಮ ಸ್ಥಳಾಂತರದ ಕುರಿತಾದ ಕಾರಣಗಳನ್ನು ಇವರಿಬ್ಬರೂ ಬಹಿರಂಗಪಡಿಸಿಲ್ಲ.
ಅದಾಗ್ಯೂ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲಿನ ಲಾಭದ ವಿರುದ್ಧ ಯಾವುದೇ ನಷ್ಟವನ್ನು ಹೊಂದಿಸಲಾಗುವುದಿಲ್ಲ, ಹಾಗೂ ಕ್ರಿಪ್ಟೋ ಮೈನಿಂಗ್ ಗೆ ಕೂಡಾ ತೆರಿಗೆ ಪಾವತಿಸಬೇಕೆಂದು ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಇದನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ವಿರೋಧಿಸಿದ್ದರು. ಹಾಗೆಯೇ, ನಿಶ್ಚಲ್ ಶೆಟ್ಟಿ ಕೂಡಾ, ಭಾರತ ಸರ್ಕಾರದ ಹೊಸ ನಿಯಮಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿ ಬರೆದಿದ್ದರು. ಈ ಕ್ರಮಗಳು ಭಾರತೀಯ ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಶದಿಂದ ಸಂಪತ್ತು ಬರಿದಾಗಲು ಕಾರಣವಾಗುತ್ತದೆ ಎಂದು ಹೇಳಿದ್ದರು.
2,790.74 ಕೋಟಿ ಮೌಲ್ಯದ ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಗಾಗಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತದ ಜಾರಿ ನಿರ್ದೇಶನಾಲಯವು (ED) ಕಳೆದ ವರ್ಷ ಜೂನ್ನಲ್ಲಿ ಶೆಟ್ಟಿಗೆ ಶೋಕಾಸ್ ನೋಟಿಸ್ ನೀಡಿತ್ತು.
ಎಲ್ಲಾ ಅನ್ವಯವಾಗುವ ಕಾನೂನುಗಳಿಗೆ ಕ್ರಿಪ್ಟೋ ಪ್ಲಾಟ್ಫಾರ್ಮ್ ಅನುಸಾರವಾಗಿದೆ ಎಂದು ಶೆಟ್ಟಿ ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿದ್ದರು.