ಮಂಗಳೂರು ವಿಶ್ವ ವಿದ್ಯಾಲಯದ 40ನೆ ಘಟಿಕೋತ್ಸವ; ರ‍್ಯಾಂಕ್ ಪಡೆದ ಗ್ರಾಮೀಣ ಸಾಧಕರು

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಐದು ರ್‍ಯಾಂಕ್ ಬಂದಿದೆ. ಇವುಗಳ ಪೈಕಿ ಮೂವರು ಪ್ರಥಮ ರ್‍ಯಾಂಕ್ ಪಡೆದರೆ, ಇನ್ನಿಬ್ಬರು ಐದು ಮತ್ತು ಏಳನೇ ರ್‍ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ತೆಂಕ ನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ದೀಪಿಕಾ ನಂದಿಕೂರು ಎರಡು ಚಿನ್ನ ಮತ್ತು ಒಂದು ನಗದು ಪುರಸ್ಕಾರ ಪಡೆದಿದ್ದಾರೆ. ಇವರ ತಂದೆ ಜಯಕುಮಾರ್ ಕೂಲಿ ಕಾರ್ಮಿಕರಾದರೆ, ತಾಯಿ ಲಲಿತಾ ಬೀಡಿ ಸುರುಟುವ ಕಾಯಕ ಮಾಡುತ್ತಾರೆ. ಈಕೆ ಹೆತ್ತವರ ಏಕೈಕ ಪುತ್ರಿ. ಮೀಸಲಾತಿ ಆಧಾರದಲ್ಲಿ ಸೀಟು ಪಡೆದಿದ್ದು ಇವರು, ಬಿಎಡ್ ಪದವಿ ಪಡೆಯಬೇಕೆನ್ನುವ ಕನಸು ಕಂಡಿದ್ದರು. ಆದರೆ ಫಲಿತಾಂಶ ವಿಳಂಬವಾದ ಕಾರಣ ತನ್ನ ಕನಸನ್ನು ಕೈಬಿಟ್ಟು, ಉದ್ಯೋಗ ಮಾಡಿ ಹೆತ್ತವರಿಗೆ ಆಧಾರವಾಗಲು ಬಯಸಿದ್ದಾರೆ.
ಇದೇ ಕಾಲೇಜಿನ ಎಂಎ ಇತಿಹಾಸ ವಿಭಾಗದ ವಿದ್ಯಾರ್ಥಿನಿ ಸಚ್ಚರಿಪೇಟೆಯ ರಕ್ಷಿತಾ ಪೂಜಾರಿ ಬೆಳ್ಮಣ್ ಎರಡು ಚಿನ್ನ ಮತ್ತು ಮೂರು ನಗದು ಪುರಸ್ಕಾರ ಪಡೆದಿದ್ದಾರೆ. ಇವರ ತಂದೆ ಉಮೇಶ್ ಪೂಜಾರಿ ಮತ್ತು ತಾಯಿ ಲಲಿತಾ ಪೂಜಾರಿ ಕೂಲಿ ಕಾರ್ಮಿಕರು. ಇವರಿಗೆ ತಂಗಿ ಇದ್ದು ನರ್ಸಿಂಗ್ ವಿದ್ಯಾರ್ಥಿನಿ. ಇವರು ಈಗಾಗಲೇ ಬಿಎಡ್ ಮಾಡುತ್ತಿದ್ದು ಪಿಎಚ್‌ಡಿ ಜೊತೆಗೆ ವೈಜ್ಞಾನಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆಗೇರುವ ಕನಸು ಕಂಡಿದ್ದಾರೆ.
ಇದೇ ಕಾಲೇಜಿನ ಎಂ.ಎ. ಕನ್ನಡ ವಿಭಾಗದ ವಿದ್ಯಾರ್ಥಿನಿ ಕುಂದಾಪುರದ ರಜನಿ ಒಂದು ಚಿನ್ನ ಮತ್ತು ಆರು ನಗದು ಪುರಸ್ಕಾರ ಪಡೆದಿದ್ದಾರೆ. ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ತಾಯಿ ಮೀನಾ ಅವಿದ್ಯಾವಂತೆಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದಾರೆ. ಅಣ್ಣ ಇದ್ದು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾರೆ. ಇವರ ಶಿಕ್ಷಣಕ್ಕೆ ಅಣ್ಣ ಮತ್ತು ಇಬ್ಬರು ಮಾವಂದಿರ ಬೆಂಬಲದಿಂದ ಸಾಧನೆ ಮಾಡಿರುವ ರಜನಿ, ಮುಂದಕ್ಕೆ ಯುಪಿಎಸ್ಸಿ ಮಾಡುವ ಅಭಿಲಾಷೆ ಹೊಂದಿದ್ದಾರೆ.
ಪತ್ರಿಕೋದ್ಯಮ ವಿಭಾಗ ಉಡುಪಿ ಕಟಪಾಡಿ ಮಣಿಪುರ ಗ್ರಾಮದ ಶಾಯಿನ್ ವಾಹನ ಚಾಲಕ ಅಬ್ದುಲ್ ಹಮೀದ್-ಖತೀಜಾ ದಂಪತಿಯ ಪುತ್ರಿ. ಇವರು ಪತ್ರಿಕೋದ್ಯಮ ವಿಭಾಗದಲ್ಲಿ ಎರಡು ಚಿನ್ನ ಮತ್ತು ಮೂರು ನಗದು ಪುರಸ್ಕಾರ ಪಡೆದಿದ್ದಾರೆ. ಇವರಿಗೆ ಎರಡು ಅಕ್ಕಂದಿರಿದ್ದು ಒಬ್ಬರು ಬ್ಯಾಂಕ್ ಸಿಬ್ಬಂದಿಯಾಗಿದ್ದರೆ, ಇನ್ನೊಬ್ಬರು ಮದುವೆಯಾಗಿ ವಿದೇಶದಲ್ಲಿದ್ದಾರೆ. ಮುಂದಕ್ಕೆ ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡುವ ಗುರಿ ಹೊಂದಿದ್ದಾರೆ.
ಮಂಗಳೂರು ವಿವಿಯಲ್ಲಿ ಇಂಡಸ್ಟ್ರೀಸ್ ಕೆಮಿಸ್ಟ್ರಿ ವಿಭಾಗದಲ್ಲಿ ವಿಟ್ಲ ಮಂಗಿಲಪದವು ನಿವಾಸಿ ಕ್ರಿಸ್ಟಲ್ ಲಿವಿಯಾ ಮಸ್ಕರೇನಸ್ ಎರಡು ಚಿನ್ನದ ಪದಕ ಪಡೆದಿದ್ದಾರೆ.
ಇವರ ತಂದೆ ಫ್ರಾನ್ಸಸ್ ಮಸ್ಕರೇನಸ್ ನಿವೃತ್ತ ಶಿಕ್ಷಕರಾದರೆ ತಾಯಿ ಫ್ಲೋರಿನ್ ಡಿಸೋಜ ಶಿಕ್ಷಕಿ ವೃತ್ತಿಯಲ್ಲಿದ್ದಾರೆ. ಇವರಿಗೆ ತಮ್ಮ ಇದ್ದಾರೆ. ಬಿಎಸ್ಸಿಯಲ್ಲಿ ಒಂಬತ್ತನೇ ರ್‍ಯಾಂಕ್ ಪಡೆದಿದ್ದ ಇವರು, ಪ್ರಸ್ತುತ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಮುಂದಕ್ಕೆ ಪಿಎಚ್‌ಡಿ ಮಾಡುವ ಕನಸು ಕಂಡಿದ್ದಾರೆ.